Greater Bengaluru News9 : ಐಪಿಎಲ್ 2026ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಫೈನಲ್ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಇದೇ ವೇಳೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸರು ಹಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದಾರೆ.
ಮೇ 31ರಂದು ನಡೆಯಲಿರುವ ಫೈನಲ್ ಪಂದ್ಯ ಬಳಿಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಮಹತ್ವದ ಸೂಚನೆಗಳನ್ನು ಪ್ರಕಟಿಸಲಾಗಿದೆ.
ಪಂದ್ಯದ ಫಲಿತಾಂಶದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ವಿಜಯೋತ್ಸವ ಅಥವಾ ಸಂಭ್ರಮಾಚರಣೆ ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ರಸ್ತೆಗಳಲ್ಲಿ ಜನರು ಗುಂಪುಗೂಡುವುದು, ಸಂಚಾರಕ್ಕೆ ಅಡ್ಡಿಪಡಿಸುವುದು ಅಥವಾ ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪೊಲೀಸರ ಪ್ರಮುಖ ಮಾರ್ಗಸೂಚಿಗಳು
- ಪಂದ್ಯದ ಫಲಿತಾಂಶದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ನಡೆಸುವಂತಿಲ್ಲ.
ರಸ್ತೆಗಳಿಗೆ ಮುಖಮಾಡಿ ಎಲ್‌ಇಡಿ ವಾಲ್‌ಗಳನ್ನು ಅಳವಡಿಸಲು ಅನುಮತಿ ಇರುವುದಿಲ್ಲ. - ಪೂರ್ವಾನುಮತಿ ಪಡೆಯದೆ ಮಾಲ್, ಪಬ್ ಹಾಗೂ ವಾಣಿಜ್ಯ ಕೇಂದ್ರಗಳ ಹೊರಭಾಗದಲ್ಲಿ ದೊಡ್ಡ ಪರದೆ ಅಳವಡಿಸಿ ಪಂದ್ಯ ಪ್ರಸಾರ ಮಾಡುವಂತಿಲ್ಲ.
- ಪಟಾಕಿ ಸಿಡಿಸುವುದು ಹಾಗೂ ಅಪಾಯಕಾರಿ ವಸ್ತುಗಳ ಬಳಕೆಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
- ಟ್ರಾಫಿಕ್ ಪೊಲೀಸರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- ಬೈಕ್ ರ್ಯಾಲಿ, ವ್ಹೀಲಿಂಗ್, ಸ್ಟಂಟ್ ಪ್ರದರ್ಶನ ಹಾಗೂ ಅತಿವೇಗದ ಚಾಲನೆಗೆ ಅವಕಾಶವಿಲ್ಲ.
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಗಲಾಟೆ ಸೃಷ್ಟಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. - ಬೇರೆ ತಂಡದ ಅಭಿಮಾನಿಗಳನ್ನು ನಿಂದಿಸುವುದು ಅಥವಾ ಪ್ರಚೋದನಕಾರಿ ವರ್ತನೆ ತೋರುವುದು ಕಾನೂನು ಕ್ರಮಕ್ಕೆ ಕಾರಣವಾಗಬಹುದು.
- ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಪೋಸ್ಟ್‌ಗಳು, ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹರಡಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
- ನಗರದಲ್ಲಿ ಪಂದ್ಯದ ದಿನ ಹಾಗೂ ಬಳಿಕ ಹೆಚ್ಚಿನ ಜನಸಂದಣಿ ಉಂಟಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಹೆಚ್ಚುವರಿ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದು, ಅಗತ್ಯ ಸ್ಥಳಗಳಲ್ಲಿ ನಿಗಾ ವಹಿಸಲಿದ್ದಾರೆ.
ಪಂದ್ಯವನ್ನು ಸಂಭ್ರಮದಿಂದ ವೀಕ್ಷಿಸಿ, ಆದರೆ ಕಾನೂನು ಹಾಗೂ ಪೊಲೀಸರ ಸೂಚನೆಗಳನ್ನು ಪಾಲಿಸಿ ನಗರದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


