ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡಗಳು ತಲೆ ಎತ್ತಿವೆ. ಇದರಿಂದಾಗಿಯೇ ಕಳೆದ ತಿಂಗಳು ಒಂಬತ್ತು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟಾದರೂ ಈ ಅನಧಿಕೃತ ಕಟ್ಟಡಗಳ ಸರ್ವೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾತ್ರ ಮುಂದಾಗುತ್ತಿಲ್ಲ. ಈ ಬಗ್ಗೆ ಮುಖ್ಯಮಮತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸೂಚನೆ ನೀಡಿದ್ದರೂ ಪಾಲಿಕೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಬಾಬುಸಾ ಪಾಳ್ಯದಲ್ಲಿ ಅನಧಿಕೃತ ಕಟ್ಟಡ ಕುಸಿತದಿಂದ 9 ಮಂದಿ ಕಾರ್ಮಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಎಂಟು ವಲಯದಲ್ಲಿ ಅನಧಿಕೃತ ಕಟ್ಟಡಗಳ ಸರ್ವೆ ನಡೆಸಿ ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಲಾಗಿತ್ತು.
ಒಂದು ವಾರವಲ್ಲ, ಎರಡು ವಾರ ಪೂರ್ಣಗೊಂಡರೂ ಸರ್ವೇ ಕಾರ್ಯ ಪೂರ್ಣಗೊಂಡಿಲ್ಲ. ಎರಡು ವಾರಗಳಲ್ಲಿ ಈವರೆಗೂ ಕೇವಲ 2,562 ಅನಧಿಕೃತ ಕಟ್ಟಡಗಳನ್ನ ಮಾತ್ರ ಪತ್ತೆ ಮಾಡಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ಅಧಿಕಾರಿಗಳು ಅಕ್ರಮ ಕಟ್ಟಡಗಳ ಸರ್ವೆ ಕೈ ಬಿಟ್ಟಿದ್ದಾರೆ. ಹದಿನೈದು ದಿನಗಳಿಂದ ಕೇವಲ 2,500 ಕಟ್ಟಡಗಳ ಮಾತ್ರ ಗುರುತು ಮಾಡಿದ್ದಾರೆ. ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಬಾಬುಸಪಾಳ್ಯದ ಅನಧಿಕೃತ ಕಟ್ಟಡ ಕುಸಿದು 9 ಜನರ ಸಾವಿನ ಬಳಿಕ ಅನಧಿಕೃತ ಕಟ್ಟಡಗಳ ವಿರುದ್ಧ ಪಾಲಿಕೆ ಸಮರ ಸಾರಿತ್ತು. ಡಿಸಿಎಂ ಡಿಕೆ ಶಿವಕುಮಾರ್ ಸೂಚನೆಯಂತೆ ಪಾಲಿಕೆ, ಮೂರು ಹಂತದಲ್ಲಿ ರಾಜಧಾನಿಯ ಅನಧಿಕೃತ ಕಟ್ಟಡಗಳನ್ನ ಸರ್ವೆ ಮಾಡುವುದಕ್ಕೆ ಸಜ್ಜಾಗಿತ್ತು. ಫೋಟೋ, ವಿಡಿಯೋ ಸಂಗ್ರಹ, ಪರವಾನಗಿ ಪರಿಶೀಲನೆ, ಸ್ಯಾಟಲೈಟ್ ಸರ್ವೆ ಮೂಲಕ ಅನಧಿಕೃತ ಕಟ್ಟಡಗಳ ಪತ್ತೆಗೆ ಸಜ್ಜಾಗಿರುವ ಪಾಲಿಕೆ, ಆ ಮೂಲಕ ರಾಜಧಾನಿಯ ಅನಧಿಕೃತ ಕಟ್ಟಡಗಳ ಮಾಲೀಕರಿಗೆ ಬಿಸಿ ಮುಟ್ಟಿಸಿತ್ತು. ಆರಂಭದಲ್ಲಿಯೇ ಪಾಲಿಕೆ, ಆ್ಯಪ್ ಬಳಕೆಯ ಅಡೆತಡೆ ಎದುರಿಸಿತು.
ಇನ್ನು ಎಂಟು ವಲಯಗಳಲ್ಲಿ ಆಯಾ ವಲಯ ಆಯುಕ್ತರ ನೇತೃತ್ವದಲ್ಲಿ ಅನಧಿಕೃತ ಕಟ್ಟಡಗಳ ಸರ್ವೆ ನಡೆಯಬೇಕಿತ್ತು. ಒಂದು ವೇಳೆ ಅನಧಿಕೃತ ಕಟ್ಟಡಗಳು ಪತ್ತೆಯಾದರೆ ಮಾಲೀಕರ ಖರ್ಚಿನಲ್ಲಿ ತೆರವು ಮಾಡುವುದಕ್ಕೆ ಪಾಲಿಕೆ ನೋಟಿಸ್ ಕೊಡುತ್ತದೆ. ನೋಟಿಸ್ ನೀಡಿದ ಬಳಿಕವೂ ಕಟ್ಟಡ ತೆರವಾಗದಿದ್ದರೆ ಬಿಬಿಎಂಪಿಯೇ ಕಟ್ಟಡ ತೆರವು ಮಾಡಿ ಅದರ ಖರ್ಚು ವೆಚ್ಚವನ್ನ ಕಟ್ಟಡದ ಮಾಲೀಕರಿಂದ ಭರಿಸೋಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಹೇಳಿದ್ದರು.
ಅನಧಿಕೃತ ಕಟ್ಟಡಗಳ ಮೇಲೆ ಜೆಸಿಬಿ ಮೂಲಕ ಸಮರ ಸಾರಿದ ಪಾಲಿಕೆ, ನಗರದ ಹೃದಯ ಭಾಗ ಮೆಜೆಸ್ಟಿಕ್ನಲ್ಲಿ ತಲೆ ಎತ್ತಿದ್ದ ಅನಧಿಕೃತ ಕಟ್ಟಡವನ್ನ ತೆರವು ಮಾಡಿದೆ. ಮೆಜೆಸ್ಟಿಕ್ನ ಶಾಂತಲಾ ಸಿಲ್ಕ್ಸ್ ಪಕ್ಕದಲ್ಲಿ ಅನಧಿಕೃತವಾಗಿ ತಲೆಎತ್ತಿದ ದಿಲೀಪ್ ಕುಮಾರ್ ಎನ್ನುವವರ ಕಟ್ಟಡದ ಭಾಗಗಳನ್ನ ಬಿಬಿಎಂಪಿಯ ಪಶ್ಚಿಮ ವಲಯ ಆಯುಕ್ತೆ ಅರ್ಚನಾ ನೇತೃತ್ವದ ತಂಡ ತೆರವು ಮಾಡಿದೆ. ನಕ್ಷೆ ನಿಯಮ ಉಲ್ಲಂಘಿಸಿದ್ದ ಕಟ್ಟಡದ ಮುಂಭಾಗ ತೆರವು ಮಾಡಿರುವ ಪಾಲಿಕೆ, ಮತ್ತೊಂದು ನೋಟಿಸ್ ನೀಡಿ ಅದಕ್ಕೂ ಉತ್ತರ ಬಾರದಿದ್ದರೆ ಕಟ್ಟಡದ ಉಳಿದ ಭಾಗಗಳ ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಪಶ್ಚಿಮ ವಲಯ ಆಯುಕ್ತೆ ಅರ್ಚನಾ ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಮಳೆ ಬಂದಾಗ ಮನೆ ಮೇಲೆ ಗಮನ ಎನ್ನುವ ಹಾಗೇ ಅನಧಿಕೃತ ಕಟ್ಟಡ ಕುಸಿದು 9 ಜನರು ಅಸುನೀಗಿದ ಬಳಿಕ, ಇದೀಗ ಅನಧಿಕೃತ ಕಟ್ಟಡಗಳ ವಿರುದ್ಧ ಸವಾರಿ ಮಾಡುವುದಕ್ಕೆ ಪಾಲಿಕೆ ಸಜ್ಜಾಗಿತ್ತು, ಆದರೆ ಹದಿನೈದೇ ದಿನಗಳಲ್ಲಿ ಪಾಲಿಕೆ ಸರ್ವೆ ನಡೆಸುವುದನ್ನೇ ನಿಲ್ಲಿಸಿಬಿಟ್ಟಿದೆ.


