BBMP
Loading ...

Kempegowda

Greater Bengaluru News9: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಅದ್ದೂರಿಯಾಗಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡಲಾಯ್ತು. ಸಿಎಂ ಡಿ.ಕೆ ಶಿವಕುಮಾರ್ ಕೆಂಪೇಗೌಡರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೆಂಪೇಗೌಡ ಜಯಂತಿ ಅಂಗವಾಗಿ ಭಾಷಣ ಮಾಡುವಾಗ ಸರ್ಕಾರದ ಹೊಸ ಹೊಸ ಆಲೋಚನೆಯನ್ನು ಪ್ರಕಟಿಸಿದ್ದಾರೆ.

ಭಾಷಣದ ಸಂದರ್ಭದಲ್ಲಿ ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಕೆಂಪೇಗೌಡರ ಸ್ಮರಣೆಗೆ ಸಂಬಂಧಿಸಿದಂತೆ ಹಲವು ಮುಖ್ಯ ಘೋಷಣೆಗಳನ್ನು ಮಾಡಿದರು. ಇದು ರಾಜ್ಯದ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಮಾಗಡಿಯಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ ಪ್ರಕಾರ, ಮಾಗಡಿ ಬಳಿ ಸುಮಾರು 10 ಎಕರೆ ಪ್ರದೇಶದಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 5.5 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಳಿದ ಭೂಮಿಯ ಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳುವುದು ಎಂದು ತಿಳಿಸಿದರು.

ಮಾಗಡಿಯಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಟೌನ್ ಪ್ಲಾನಿಂಗ್ ಮಾಡಲು ಸೂಚನೆ ನೀಡಿರುವುದಾಗಿ ಸಿಎಂ ಹೇಳಿದರು. ಏರ್‌ಪೋರ್ಟ್‌ನಲ್ಲಿರುವ ಕೆಂಪೇಗೌಡರ ಪ್ರತಿಮೆಯನ್ನು ಇನ್ನಷ್ಟು ಸುಂದರವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಬೆಂಗಳೂರಿನ ವಿವಿಧೆಡೆ ಕೆಂಪೇಗೌಡರ ಪುತ್ತಳಿಗಳನ್ನು ನಿರ್ಮಿಸುವುದಕ್ಕೂ ಯೋಜನೆ ರೂಪಿಸಲಾಗುತ್ತಿದೆ. ಈ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಗಮನ ಹರಿಸುವರು ಎಂದು ಮುಖ್ಯಮಂತ್ರಿ ತಿಳಿಸಿದರು.

ಕೆಂಪೇಗೌಡ ಜಯಂತಿ ಆಚರಣೆ ವಿಸ್ತರಣೆ!
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ವರ್ಷ ಒಂದು ಕ್ಷೇತ್ರದಲ್ಲಿ ಕೆಂಪೇಗೌಡರ ಜಯಂತಿ ಆಚರಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಮುಂದಿನ ವರ್ಷದಿಂದ ಈ ಯೋಜನೆ ಜಾರಿಗೆ ಬರಲಿದೆ. ಕೇವಲ ವಿಧಾನಸೌಧಕ್ಕೆ ಮಾತ್ರ ಸೀಮಿತವಾಗದೆ, ನಗರದಾದ್ಯಂತ ಕೆಂಪೇಗೌಡರ ಸ್ಮರಣೆಯನ್ನು ಆಚರಿಸುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೆಟ್ರೋ ವಿಸ್ತರಣೆ ಬಗ್ಗೆಯೂ ಮಾಹಿತಿ ನೀಡಿದರು. ಇನ್ನುಳಿದ ಎರಡು ವರ್ಷಗಳಲ್ಲಿ ಮೆಟ್ರೋ ವ್ಯವಸ್ಥೆಯನ್ನು ವಿಸ್ತರಿಸಲು ಸರ್ಕಾರ ಗಮನ ಹರಿಸುತ್ತಿದೆ. ಸುಮಾರು 500 ಕಿಲೋಮೀಟರ್ ಮೆಟ್ರೋ ಮಾರ್ಗಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಅವಧಿಯಲ್ಲೇ ಈ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಪ್ರಯತ್ನ ಮಾಡುವುದಾಗಿಯೂ ಹೇಳಿದರು.

ಕೆಂಪೇಗೌಡರು ಬೆಂಗಳೂರಿನ ರಾಜಧಾನಿಯನ್ನು ಸ್ಥಾಪಿಸಿದ ಮಹಾನ್ ವ್ಯಕ್ತಿ. ಅವರ ಸೇವೆಯನ್ನು ಜನರು ಮರೆಯುವಂತಿಲ್ಲ. ಅವರ ಹೆಸರನ್ನು ಉಳಿಸುವುದಕ್ಕಾಗಿ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಯೋಜಿಸುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಏರ್‌ಪೋರ್ಟ್‌ನಲ್ಲಿ ನಡೆದ ಈ ಕಾರ್ಯಕ್ರಮ ಕೆಂಪೇಗೌಡರ ಸ್ಮರಣೆಗೆ ಮತ್ತು ನಗರದ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವಂತಿದೆ. ಮಾಗಡಿಯಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಟೌನ್ ಪ್ಲಾನಿಂಗ್, ಹೆಚ್ಚುವರಿ ಪುತ್ತಳಿಗಳ ನಿರ್ಮಾಣ, ಜಯಂತಿ ಆಚರಣೆಯ ವಿಸ್ತರಣೆ ಮತ್ತು ಮೆಟ್ರೋ ವಿಸ್ತರಣೆಯಂತಹ ಯೋಜನೆಗಳು ಬೆಂಗಳೂರಿನ ಅಭಿವೃದ್ಧಿಗೆ ಸಹಕಾರಿಯಾಗುವುದು ಎಂದು ನಿರೀಕ್ಷಿಸಲಾಗಿದೆ. ಈ ಘೋಷಣೆಗಳು ನಗರದ ಜನರಲ್ಲಿ ಹೆಚ್ಚಿನ ಕುತೂಹಳ ಮೂಡಿಸಿದೆ. ವಿಶೇಷವಾಗಿ ಮೆಟ್ರೋ ವಿಸ್ತರಣೆಯು ಸಾರಿಗೆ ಸಮಸ್ಯೆಗೆ ನಿರಂತರ ಪರಿಹಾರ ನೀಡುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *