BBMP
Loading ...

Siddaramaiah

ಬೆಂಗಳೂರು: ಮುಡಾ ಪ್ರಕರಣದ ತನಿಖೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯರಿಗೆ ಲೋಕಾಯುಕ್ತ ಪೊಲೀಸರು ಕ್ಲೀನ್​ಚಿಟ್​ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆಯೇ ಇದೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಅವರ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್​ ಆದೇಶವನ್ನು ಕಾಯ್ದಿರಿಸಿದೆ.

ಲೋಕಾಯುಕ್ತ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ, ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸ್ನೇಹಮಯಿ ಕೃಷ್ಣ ಅವರು ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್​, ಪ್ರತಿವಾದಿಗಳ ವಾದ-ಪ್ರತಿವಾದಗಳನ್ನು ಆಲಿಸಿ, ಆದೇಶವನ್ನು ಕಾಯ್ದಿರಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ಹೈಕೋರ್ಟ್​ ಏಕಸದಸ್ಯ ಪೀಠ ತೀರ್ಪು ಕಾಯ್ದಿರಿಸಿದ್ದಾರೆ.

ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಮಣೀಂದರ್ ಸಿಂಗ್, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ವಾದಮಂಡನೆ ಆಲಿಸುವ ಅಗತ್ಯವಿಲ್ಲ. ಆರೋಪಿಯಾದವರಿಗೆ ತನಿಖಾ ಸಂಸ್ಥೆ ಆಯ್ಕೆ ಮಾಡುವ ಯಾವುದೇ ಹಕ್ಕು ಇಲ್ಲ. ರಾಜಕೀಯ ಮುಖಂಡರ ಹೆಸರಿರುವುದರಿಂದ ಸ್ಥಳೀಯ ಪೊಲೀಸರಿಂದ ದಕ್ಷ ತನಿಖೆ ಸಾಧ್ಯವಿಲ್ಲ. ರಾಜಕೀಯ ಒತ್ತಡದಿಂದ ತನಿಖೆ ದಾರಿ ತಪ್ಪಿಸಬಹುದು. ಸತ್ಯ-ಅಸತ್ಯತೆ ಅನಾವರಣಗೊಳಿಸಲು ಸಿಬಿಐ ತನಿಖೆ ಅನಿವಾರ್ಯ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಸರ್ಕಾರದ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್ ಹಿರಿಯ ವಕೀಲ, ಕಪಿಲ್ ಸಿಬಲ್, ಎಲ್ಲ ಪ್ರಕರಣಗಳು ಸಿಬಿಐಗೆ ವಹಿಸಬೇಕು ಅನ್ನೋದು ಸರಿಯಲ್ಲ. ಈ ರೀತಿ ಬೇಡಿಕೆ ಇಟ್ಟರೆ, ಲೋಕಾಯುಕ್ತ ಕಾರ್ಯ ನಿರ್ವಹಿಸುವುದಾದರೂ ಏಕೆ? ಎಂದು ಪ್ರಶ್ನಿಸಿದರು. ಅಲ್ಲದೆ, ರಾಜ್ಯದ ಜನಪ್ರತಿನಿಧಿಗಳ ವಿರುದ್ಧದ ಯಾವುದೇ ಪ್ರಕರಣಗಳ ವಿಚಾರಣೆಗೆ ಲೋಕಾಯುಕ್ತಕ್ಕೆ ಅಧಿಕಾರವಿದೆ. ಲೋಕಾಯುಕ್ತ ಪೊಲೀಸರು ಸ್ವತಂತ್ರ ತನಿಖಾ ಸಂಸ್ಥೆಯೆಂದು ವಾದ ಮಂಡಿಸಿದರು.

ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರದ ಹಿಡಿತದಲ್ಲಿದೆ ಎಂದಿದ್ದಾರೆ. ಆದರೆ, ಸಿಬಿಐ ಕೂಡಾ ಕೇಂದ್ರ ಸರ್ಕಾರದ ಹಿಡಿತದಲ್ಲಿದೆ. ಹೀಗಿರುವಾಗ ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆ ಎನ್ನಲಾಗುವುದಿಲ್ಲ. ಲೋಕಾಯುಕ್ತ ಸಂಸ್ಥೆ ಕಳಪೆ ಎನ್ನಲಾಗದು. ಲೋಕಾಯುಕ್ತ ಸಂಸ್ಥೆಯ ನಿಗಾ ಇರುವುದರಿಂದ ತನಿಖೆ ಸ್ವತಂತ್ರವಾಗಿರಲಿದೆ ಎಂದು ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ ವಾದ ಮಂಡನೆ ಮಾಡಿದರು.

ಸಿಎಂ ಉಳಿಸಲು ಇಡೀ ಸಚಿವ ಸಂಪುಟವೇ ಒಮ್ಮತದ ನಿರ್ಣಯ ಕೈಗೊಂಡಿತ್ತು. ತನಿಖೆಯ ವಿಶ್ವಾಸಾರ್ಹತೆ ಕಾಪಾಡಲು ಸ್ವತಂತ್ರ ತನಿಖೆ ಅಗತ್ಯವಿದೆ. ಸರ್ಕಾರದ ಉನ್ನತ ವ್ಯಕ್ತಿಗಳು ಆರೋಪಿಯಾಗಿದ್ದಾಗ ಇದು ಅಗತ್ಯ. ಸುಪ್ರೀಂಕೋರ್ಟ್ ಸ್ವತಃ ಸಿಬಿಐ ತನಿಖೆಗೆ ಹಸ್ತಾಂತರಿಸಿದ ಉದಾಹರಣೆಗಳಿವೆ ಎಂದು ಸ್ನೇಹಮಯಿ ಕೃಷ್ಣ ಪರ ವಕೀಲ ಮಣೀಂದರ್ ಸಿಂಗ್ ವಾದ ಮಂಡನೆ ಮಾಡಿದರು.

ಸರ್ಕಾರ ಸಿಎಂ ರನ್ನು ಪ್ರತಿವಾದಿಯಾಗಿಸದೇ ಅರ್ಜಿ ಸಲ್ಲಿಸಬಹುದಿತ್ತು. ಆದರೆ, ಸದುದ್ದೇಶದಿಂದ ನಾವು ಅವರನ್ನು ಪ್ರತಿವಾದಿಯಾಗಿಸಿದ್ದೇವೆ. ಸಿಎಂ ಸ್ವತಃ ಸ್ವತಂತ್ರ ತನಿಖೆಯನ್ನು ಸ್ವಾಗತಿಸಬೇಕಿತ್ತು. ತನಿಖೆಗೆ ಆದೇಶವಾದ ಕೂಡಲೇ ಸಿಎಂ ರಾಜಿನಾಮೆ ನೀಡಬೇಕಿತ್ತು ಎಂದು ಮಣೀಂದರ್ ಸಿಂಗ್ ವಾದಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಾಲಯ ಎಫ್ಐಆರ್‌ ಆದ ಮಾತ್ರಕ್ಕೇ ರಾಜಿನಾಮೆ ನೀಡಬೇಕೆಂಬುದು ಅತಿಯಾದ ನಿರೀಕ್ಷೆಯೆ ಎಂದು ಪ್ರಶ್ನಿಸಿತು. ಎರಡೂ ಕಡೆಯ ವಾದಮಂಡನೆಯ ಬಳಿಕ ಹೈಕೋರ್ಟ್​ ಆದೇಶ ಕಾಯ್ದಿರಿಸಿತು. ಅಲ್ಲದೆ, ಲೋಕಾಯುಕ್ತ ಪೊಲೀಸರ ಅಂತಿಮ ವರದಿ ಸಲ್ಲಿಕೆಗೆ ಆದೇಶ ಪ್ರಕಟಿಸುವವರೆಗೂ ಗಡುವು ವಿಸ್ತರಣೆ ಮಾಡಿತು.

ರಾಜಾಜಿನಗರದ ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ: 30ಕ್ಕೂ ಹೆಚ್ಚು ಬೈಕ್ ಸುಟ್ಟು ಭಸ್ಮ

Leave a Reply

Your email address will not be published. Required fields are marked *