Greater Bengaluru News9 : ನ್ಯಾಯಾಲಯದ ಅನುಮತಿಯಿಲ್ಲದೆ ಬಿಡದಿ ಟೌನ್ಶಿಪ್ ಯೋಜನಾ ಪ್ರದೇಶದಲ್ಲಿ ಒಂದು ಇಟ್ಟಿಗೆಯನ್ನೂ ಅಲುಗಾಡಿಸುವಂತಿಲ್ಲ ಹಾಗೂ ಒಂದೇ ಒಂದು ಮರವನ್ನೂ ಕಡಿಯುವಂತಿಲ್ಲ ಎಂದು ಹೈಕೋರ್ಟ್ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಬಿಡದಿ ಸ್ಮಾರ್ಟ್ ಸಿಟಿ ಯೋಜನೆಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ನಾಲ್ವರು ರೈತರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು.
ಸರ್ಕಾರ ಪರಿಹಾರ ಮೊತ್ತ ನಿಗದಿಪಡಿಸಿದ ತಕ್ಷಣವೇ ಬುಲ್ಡೋಜರ್ ತೆಗೆದುಕೊಂಡು ಹೋಗುವಂತಿಲ್ಲ ಹಾಗೂ ರಾತ್ರೋರಾತ್ರಿ ಆಸ್ತಿ ನಾಶಪಡಿಸುವ ಕೆಲಸಕ್ಕೆ ಸರ್ಕಾರ ಕೈಹಾಕಬಾರದು ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ಪರಿಹಾರ ಮೊತ್ತ ಪ್ರಕಟವಾದರೂ ಹೈಕೋರ್ಟ್ ಅನುಮತಿ ಪಡೆಯದೆ ಕೃಷಿಕರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದೂ ಸೂಚಿಸಿತು.
ಬಹಳಷ್ಟು ರೈತರು ಭೂಮಿ ನೀಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ ಎಂಬ ಸರ್ಕಾರದ ಹೇಳಿಕೆಗೆ ಯಾವುದೇ ಅಧಿಕೃತ ದಾಖಲೆ ಇಲ್ಲ ಎಂದೂ, ವಾಸ್ತವದಲ್ಲಿ ಶೇ.5ರಷ್ಟು ರೈತರೂ ಭೂಮಿ ನೀಡಲು ಒಪ್ಪಿಲ್ಲ ಎಂದೂ ರೈತರ ಪರ ವಕೀಲರು ವಾದ ಮಂಡಿಸಿದರು.
ಗ್ರೇಟರ್ ಬೆಂಗಳೂರು ಡೆವಲಪ್ಮೆಂಟ್ ಅಥಾರಿಟಿ ಪರ ವಕೀಲ ಶಿವಪ್ರಕಾಶ್ ಶಾಂತನಗೌಡರ್, ಕೃಷಿಕರನ್ನು ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ ಎಂದು ಅಡ್ವೊಕೇಟ್ ಜನರಲ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದೂ, ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಆರಂಭಿಕ ಹಂತದಲ್ಲಿದೆ ಎಂದೂ ತಿಳಿಸಿದರು.
ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಪರಿಹಾರ ಮೊತ್ತ ಅಂತಿಮವಾಗಿ ನಿಗದಿಯಾಗುವವರೆಗೆ ಯಾವುದೇ ರೈತರನ್ನು ತೆರವುಗೊಳಿಸುವುದಿಲ್ಲ ಹಾಗೂ ಪರಿಹಾರದ ವಿವರಗಳನ್ನು ಮೊದಲು ಹೈಕೋರ್ಟ್ ಪೀಠದ ಮುಂದಿಟ್ಟು, ನ್ಯಾಯಾಲಯದ ಗಮನಕ್ಕೆ ತಂದ ಬಳಿಕವೇ ಮುಂದಿನ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರದ ಪರ ಎಜಿ ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯ, ರಾತ್ರೋರಾತ್ರಿ ಪರಿಹಾರ ನಿಗದಿಪಡಿಸಿ ಮರ ಕಡಿಯುವ ಕೆಲಸ ನಡೆಯುವುದಿಲ್ಲವಾದ್ದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಬಳಿಕ ಮುಖ್ಯ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಿದ ನ್ಯಾಯಾಲಯ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹೊಸ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ನಿಗದಿಪಡಿಸಿತು.


