Greater Bengaluru News9 : ಪತಿಯಾಗಲಿ ಅಥವಾ ಇನ್ನಿತರ ಯಾವುದೇ ವ್ಯಕ್ತಿಯಾಗಲಿ, ಪತ್ನಿ ಸೇರಿದಂತೆ ಯಾವುದೇ ಮಹಿಳೆಗೆ ಮನೆಯ ಕೆಲಸಗಳನ್ನು ಮಾಡುವಂತೆ ಅಥವಾ ಅತ್ತೆ-ಮಾವಂದಿರನ್ನು ನೋಡಿಕೊಳ್ಳುವಂತೆ ಆಜ್ಞಾಪಿಸಲು ಹಾಗೂ ಹಕ್ಕು ಚಲಾಯಿಸಿ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವೃದ್ಧ ಪೋಷಕರನ್ನು ನೋಡಿಕೊಳ್ಳುವ ಪ್ರಾಥಮಿಕ ಕರ್ತವ್ಯವು ಅವರ ಸ್ವಂತ ಮಗ ಅಥವಾ ಮಗಳ ಮೇಲಿರುತ್ತದೆಯೇ ಹೊರತು ಅಳಿಯ ಅಥವಾ ಸೊಸೆಯ ಮೇಲಲ್ಲ ಎಂದು ನ್ಯಾಯಮೂರ್ತಿ ಚಿಲ್ಲಕೂರು ಸುಮಾಲತಾ ಅವರ ಪೀಠವು ಸ್ಪಷ್ಟಪಡಿಸಿದೆ. ಅತ್ತೆ-ಮಾವಂದಿರನ್ನು ನೋಡಿಕೊಳ್ಳುವುದು ಸೊಸೆ ಅಥವಾ ಅಳಿಯನ ಸ್ವಯಂಪ್ರೇರಿತ ನಿರ್ಧಾರವಾಗಿರಬೇಕೇ ವಿನಃ ಬಲವಂತದ್ದಲ್ಲ ಎಂದು ಕೋರ್ಟ್ ಹೇಳಿದೆ.
ಪತ್ನಿ ಹಾಗೂ ಅಪ್ರಾಪ್ತ ಮಗಳಿಗೆ ಮಾಸಿಕ ಜೀವನಾಂಶ (ಕ್ರಮವಾಗಿ 5,000 ರೂ. ಮತ್ತು 4,000 ರೂ.) ನೀಡುವಂತೆ ತುಮಕೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಜಾಗೊಳಿಸುವ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ತಾನು ವೃದ್ಧ ಪೋಷಕರನ್ನು ನೋಡಿಕೊಳ್ಳಬೇಕಿರುವುದರಿಂದ ಜೀವನಾಂಶದ ಮೊತ್ತ ಹೆಚ್ಚಾಗಿದೆ ಎಂದು ಪತಿ ವಾದಿಸಿದ್ದರು. ಜೊತೆಗೆ, ಮದುವೆಯಾದ ಆರೇ ತಿಂಗಳಿಗೆ ಪತ್ನಿಯು ಮನೆಗೆಲಸ ಮಾಡಲು ಹಾಗೂ ತನ್ನ ಪೋಷಕರನ್ನು ನೋಡಿಕೊಳ್ಳಲು ನಿರಾಕರಿಸುತ್ತಿದ್ದಾಳೆ ಮತ್ತು ತನಗೆ ಹಾಗೂ ತನ್ನ ಪೋಷಕರಿಗೆ ತಿಳಿಸದೆ ಪದೇಪದೇ ತವರು ಮನೆಗೆ ಹೋಗುತ್ತಿದ್ದಾಳೆ ಎಂದು ಆರೋಪಿಸಿದ್ದರು.
ಈ ವಾದಗಳನ್ನು ತೀವ್ರವಾಗಿ ತಳ್ಳಿಹಾಕಿದ ನ್ಯಾಯಮೂರ್ತಿ ಸುಮಾಲತಾ ಅವರು, ಪತಿಯು ಪತ್ನಿಯನ್ನು ಮನೆಗೆಲಸ ಮಾಡಲು ಮತ್ತು ಪೋಷಕರನ್ನು ನೋಡಿಕೊಳ್ಳಲು ಕೆಲಸಕ್ಕೆ ಇಟ್ಟುಕೊಂಡಿರುವ ಕೆಲಸದಾಳಿಯಂತೆ ಭಾವಿಸಿ ವಾದಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಹಿಳೆಗೆ ತನ್ನ ವೃತ್ತಿ, ಹಣಕಾಸು ಮತ್ತು ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಪೂರ್ಣ ಹಾಗೂ ಮೂಲಭೂತ ಹಕ್ಕಿದೆ. ಮದುವೆ ಎನ್ನುವುದು ಇನ್ನೊಬ್ಬರ ವೈಯಕ್ತಿಕ ಸ್ವಾತಂತ್ರ್ಯ, ಇಚ್ಛೆ ಮತ್ತು ಆಲೋಚನೆಗಳನ್ನು ನಿಯಂತ್ರಿಸುವ, ಆಜ್ಞಾಪಿಸುವ ಅಥವಾ ಹತೋಟಿಯಲ್ಲಿಡುವ ಪರವಾನಗಿಯಲ್ಲ ಎಂದು ನ್ಯಾಯಪೀಠ ಬಣ್ಣಿಸಿದೆ.
ಲಿಂಗದ ಆಧಾರದ ಮೇಲೆ ಮಹಿಳೆಯ ಸ್ವಾತಂತ್ರ್ಯವನ್ನು ಕಸಿಯಲು ಅಥವಾ ಅವಳ ಸ್ವಾಯತ್ತತೆಯನ್ನು ನಿರ್ಬಂಧಿಸಲು ಯತ್ನಿಸುವುದು ಸಮಾನತೆಯ ತತ್ವಗಳಿಗೆ ಮತ್ತು ಸಂವಿಧಾನದ ಮಾನವ ಘನತೆ ಹಾಗೂ ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿದೆ ಎಂದು ಕೋರ್ಟ್ ಹೇಳಿದೆ. ಭಾರತೀಯ ಮಹಿಳೆಯೊಬ್ಬಳು ತನ್ನ ತವರು ಮನೆಗೆ ಹೋಗುವ ತನ್ನ ಮೂಲಭೂತ ಬಯಕೆಯನ್ನು ಈಡೇರಿಸಿಕೊಳ್ಳಲು ಗಂಡನ ಮನೆಯಲ್ಲಿ ಎಲ್ಲರ ಅನುಮತಿ ಪಡೆಯಬೇಕು ಎಂದು ಏಕೆ ಬಯಸುತ್ತಾರೋ ನನಗೆ ಅರ್ಥವಾಗುತ್ತಿಲ್ಲ ಎಂದು ನ್ಯಾಯಮೂರ್ತಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಾ, ಕೌಟುಂಬಿಕ ನ್ಯಾಯಾಲಯ ನೀಡಿದ್ದ ಜೀವನಾಂಶದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದರು.


