Greater Bengaluru News9 : ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದು, ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಬೆಸ್ಕಾಂ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಾತ್ಕಾಲಿಕವಾಗಿ ಮೀಟರ್ಗೆ 25 ಕಿಲೋ ವ್ಯಾಟ್ ವಿದ್ಯುತ್ ಪೂರೈಕೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ AEE ಮನೋಜ್ ಕುಮಾರ್ ಲಾಕ್ ಆಗಿದ್ದಾರೆ. ಮನೋಜ್ ಜೊತೆಗೆ ಕಾಂತರಾಜು ಎಂಬ ವಿದ್ಯುತ್ ಗುತ್ತಿಗೆದಾರ ಕೂಡ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರಿನ ಜೆಪಿ ನಗರದ ಬೆಸ್ಕಾಂ ಕಚೇರಿಯಲ್ಲಿ AEE ಆಗಿರುವ ಮನೋಜ್ ಕುಮಾರ್, ತಾತ್ಕಾಲಿಕವಾಗಿ ಮೀಟರ್ಗೆ 25 ಕಿಲೋ ವ್ಯಾಟ್ ವಿದ್ಯುತ್ ಪೂರೈಕೆ ಮಾಡಲು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣವನ್ನು ವಿದ್ಯುತ್ ಗುತ್ತಿಗೆದಾರ ಕಾಂತರಾಜುಗೆ ನೀಡಲು AEE ಮನೋಜ್ ಕುಮಾರ್ ಸೂಚನೆ ನೀಡಿದ್ದರು. ಈ ಬಗ್ಗೆ ದೂರುದಾರ ರಘುರಾಜ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

ದೂರು ಬಂದ ಹಿನ್ನೆಲೆ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, AEE ಮನೋಜ್ ಕುಮಾರ್ ಮತ್ತು ವಿದ್ಯುತ್ ಗುತ್ತಿಗೆದಾರ ಕಾಂತರಾಜು 50 ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೂರುದಾರ ರಘುರಾಜ್ನಿಂದ ಕಾಂತರಾಜುಗೆ ಹಣ ನೀಡುವಾಗ ಟ್ರ್ಯಾಪ್ ಆಗಿದ್ದು, ಲೋಕಾಯುಕ್ತ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.


