Greater Bengaluru News9 : ಪ್ರಸಕ್ತ ವರ್ಷದ ಬಕ್ರೀದ್ ಹಬ್ಬವನ್ನು ಮುಂಬರುವ ಮೇ 28ರಂದು ರಾಜ್ಯಾದ್ಯಂತ ಆಚರಿಸಲು ರಾಜ್ಯ ಚಂದ್ರ ದರ್ಶನ ಸಮಿತಿ ನಿರ್ಧರಿಸಿದೆ.
ಭಾನುವಾರ ಸಂಜೆ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಮಂಡಳಿ ಕಚೇರಿಯಲ್ಲಿ ಸಮಿತಿಯ ಪ್ರಮುಖ ಸದಸ್ಯರ ಉನ್ನತ ಮಟ್ಟದ ಸಭೆ ಜರುಗಿತು. ಈ ಸಭೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ಚಂದ್ರ ದರ್ಶನದ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ದೇಶದ ಯಾವುದೇ ಭಾಗದಲ್ಲೂ ದುಲ್ಹಜ್ ಮಾಸದ ಚಂದ್ರ ದರ್ಶನವಾಗಿರುವ ಬಗ್ಗೆ ಭಾನುವಾರ ಸಂಜೆಯವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.ಈ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಮೇ 28ರಂದು ಹಬ್ಬವನ್ನು ಆಚರಿಸುವುದಾಗಿ ಸಮಿತಿ ನಿರ್ಧಾರ ಪ್ರಕಟಿಸಿದೆ.
ಕರಾವಳಿ ಜಿಲ್ಲೆಗಳ ನಿಲುವು: ರಾಜ್ಯಾದ್ಯಂತ ದಿನಾಂಕ ನಿಗದಿಯಾಗಿದ್ದರೂ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯ ಖಾಝಿಗಳಿಂದ ಹಬ್ಬದ ಆಚರಣೆಯ ಕುರಿತು ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆರಾಜ್ಯಗಳ ಚಂದ್ರ ದರ್ಶನ ಸಮಿತಿಗಳೊಂದಿಗೆ ಸಂಪರ್ಕ ಸಾಧಿಸಿ, ಒಮ್ಮತದ ನಿರ್ಧಾರಕ್ಕೆ ಬಂದ ಬಳಿಕವೇ ಸಮಿತಿಯು ಈ ಪ್ರಕಟಣೆಯನ್ನು ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.


