Greater Bengaluru News9 : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ತನ್ನ ನೌಕರರು ಹಾಗೂ ನಿವೃತ್ತಿ ವೇತನದಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ನಿಗಮದ ಎಲ್ಲಾ ನೌಕರರು, ನಿವೃತ್ತಿ ವೇತನದಾರರು ಮತ್ತು ಕುಟುಂಬ ಪಿঞ্চಣಿದಾರರ ತುಟ್ಟಿಭತ್ಯೆಯನ್ನು ಪರಿಷ್ಕರಿಸಿ ಅಧಿಕೃತ ಆದೇಶ ಹೊರಡಿಸಿದೆ.
ಶೇ. 1.50 ರಷ್ಟು ಹೆಚ್ಚಳ:
ನಿಗಮವು ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ಹಾಲಿ ಲಭ್ಯವಿದ್ದ ತುಟ್ಟಿಭತ್ಯೆಯ ದರವನ್ನು ಮೂಲ ವೇತನ/ಮೂಲ ಪಿಂಚಣಿಯ ಶೇಕಡ 14.25 ರಿಂದ ಶೇಕಡ 15.75 ಕ್ಕೆ ಹೆಚ್ಚಿಸಿ ಮಂಜೂರಾತಿ ನೀಡಿದೆ. ಅಂದರೆ ಒಟ್ಟಾರೆಯಾಗಿ ಶೇಕಡ 1.50 ರಷ್ಟು ತುಟ್ಟಿಭತ್ಯೆ ಹೆಚ್ಚಳವಾದಂತಾಗಿದೆ. ಈ ಪರಿಷ್ಕೃತ ದರಗಳು ದಿನಾಂಕ 1 ಜನವರಿ 2026 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿವೆ ಎಂದು ನಿಗಮದ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಯಾರಿಗೆ ಅನ್ವಯ? ಯಾರಿಗೆ ಇಲ್ಲ?:
ಈ ಆದೇಶವು ಕಾಲಿಕ ವೇತನ ಶ್ರೇಣಿಯಲ್ಲಿರುವ ನಿಗಮದ ಎಲ್ಲಾ ಪೂರ್ಣಾವಧಿ ನೌಕರರಿಗೆ ಅನ್ವಯವಾಗುತ್ತದೆ. ಆದರೆ, ದಿನಗೂಲಿ ಕೆಲಸ ಮಾಡುತ್ತಿರುವ ಮತ್ತು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಈ ತುಟ್ಟಿಭತ್ಯೆ ಹೆಚ್ಚಳ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಮುಖ ನಿಯಮಗಳು ಇಲ್ಲಿವೆ:
ನಗದಾಗಿ ಪಾವತಿ: ಮಂಜೂರಾಗಿರುವ ಈ ಪರಿಷ್ಕೃತ ತುಟ್ಟಿಭತ್ಯೆಯನ್ನು ನೌಕರರಿಗೆ ನಗದಾಗಿಯೇ ಪಾವತಿ ಮಾಡಲಾಗುತ್ತದೆ.
ಮೂಲ ವೇತನದ ವ್ಯಾಖ್ಯಾನ: ತುಟ್ಟಿಭತ್ಯೆ ಲೆಕ್ಕಾಚಾರಕ್ಕಾಗಿ ಮೂಲ ವೇತನ ಎಂದರೆ ನೌಕರರು ಪಡೆಯುವ ಮೂಲ ವೇತನದ ಜೊತೆಗೆ ನಿಗಮದ ನಿಯಮಾವಳಿಗಳ ಪ್ರಕಾರ ನೀಡಲಾಗಿರುವ ಎಲಾಂಗೇಷನ್/ಹೆಚ್ಚುವರಿ ವೇತನ ಬಡ್ತಿಗಳು ಹಾಗೂ ವೈಯಕ್ತಿಕ ವೇತನವನ್ನು (Personal Pay) ಮಾತ್ರ ಒಳಗೊಂಡಿರುತ್ತದೆ. ವಿಶೇಷ ವೇತನ ಅಥವಾ ಇತರೆ ಯಾವುದೇ ಭತ್ಯೆಗಳನ್ನು ಇದಕ್ಕೆ ಪರಿಗಣಿಸುವುದಿಲ್ಲ.
ಬಾಕಿ ಮೊತ್ತದ ಪಾವತಿ: ಈ ಆದೇಶದ ಅನ್ವಯ ಲಭ್ಯವಾಗುವ ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು (Arrears) 2026 ರ ಮೇ ತಿಂಗಳ ವೇತನ ಅಥವಾ ಪಿಂಚಣಿ ಬಟವಾಡೆಗಿಂತ ಮುಂಚಿತವಾಗಿ ಪಾವತಿಸುವಂತಿಲ್ಲ.
ಪೂರ್ಣಾಂಕದ ಲೆಕ್ಕಾಚಾರ: ತುಟ್ಟಿಭತ್ಯೆ ಲೆಕ್ಕ ಹಾಕುವಾಗ 50 ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳು ಬಂದರೆ ಅದನ್ನು ಮುಂದಿನ ರೂಪಾಯಿಗೆ ಪೂರ್ಣಾಂಕಗೊಳಿಸಬೇಕು ಮತ್ತು 50 ಪೈಸೆಗಿಂತ ಕಡಿಮೆ ಇರುವ ಮೊತ್ತವನ್ನು ಕಡೆಗಣಿಸಬೇಕು ಎಂದು ಸೂಚಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಪರಿಷ್ಕರಿಸಿದ ಸರ್ಕಾರದ ಆದೇಶ ಹಾಗೂ ನಿಗಮದ ನೌಕರರ ಸಂಘದೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳ ಹಿನ್ನೆಲೆಯಲ್ಲಿ ಕೆಪಿಟಿಸಿಎಲ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ.


