ಬೆಂಗಳೂರು: ಟ್ರಾನ್ಸ್ಫಾರ್ಮರ್ ದುರಸ್ತಿ ಮಾಡುವಾಗ ವಿದ್ಯುತ್ ಶಾಕ್ ತಗುಲಿ ಗಂಭೀರ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪವರ್ ಮ್ಯಾನ್ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಮೃತ ಪವರ್ಮ್ಯಾನ್ರನ್ನು ಪ್ರಕಾಶ್ ಎಂದು ಗುರುತಿಸಲಾಗಿದೆ. ಕಳೆದ ಏಪ್ರಿಲ್ 2ರಂದು ಈ ಘಟನೆ ಸಂಭವಿಸಿತು. ಗಂಭೀರ ಸುಟ್ಟ ಗಾಯಗಳಿಂದ ನಾಲ್ಕೈದು ದಿನಗಳಿಂದ ಪ್ರಕಾಶ್ ಅವರು ಆಸ್ಪತ್ರೆಯಲ್ಲಿ ನೋವಿನಿಂದ ನರಳಾಡುತ್ತಿದ್ದರು. ಈ ಅವಘಡಕ್ಕೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ. ಇಷ್ಟೆಲ್ಲ ಆದರೂ ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇಷ್ಟು ದಿನ ಪ್ರಕಾಶ್ ನರಳಾಡಿದರೂ ಅವರ ಬಗ್ಗೆ ಅಧಿಕಾರಿಗಳು ಯಾವುದೇ ಮಾನವೀಯತೆ ತೋರಲಿಲ್ಲ. ಈ ಸಾವು ನ್ಯಾಯವೇ? ಇದಕ್ಕೆ ಯಾರು ಹೊಣೆ? ಕ್ರಮ ಯಾಕೆ ಜರುಗಿಸಿಲ್ಲ? ಪ್ರಾಣಕ್ಕೆ ಬೆಲೆ ಇಲ್ಲವೇ? ನಿಜಕ್ಕೂ ಬೆಸ್ಕಾಂನ ಬೇಜವ್ದಾರಿ ಇಲ್ಲಿ ಎದ್ದು ಕಾಣುತ್ತಿದೆ.
ದುಡಿಯುವ ಮಗನನ್ನು ಕಳೆದುಕೊಂಡ ಕುಟುಂಬ ಇದೀಗ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಬೆಸ್ಕಾಂನಲ್ಲಿ ಪ್ರಾಣಕ್ಕೆ ರಕ್ಷಣೆಯೇ ಇಲ್ಲ ಎಂಬಾಂತಾಗಿದೆ. ಈ ಕೂಡಲೇ ಬೆಸ್ಕಾಂ ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಘಟನೆಯ ಹಿನ್ನೆಲೆ
45 ವರ್ಷದ ಪವರ್ಮ್ಯಾನ್ ಪ್ರಕಾಶ್ ಎಂಬುವರು ಬೆಸ್ಕಾಂನ ಸುಂಕದಕಟ್ಟೆಯ ವಿಭಾಗದಲ್ಲಿ ಜಿಒಎಸ್ ತೆರೆಯಲು ಪ್ರಯತ್ನಿಸುವಾಗ ಆರ್ಕಿಂಗ್ ಸಂಭವಿಸಿದ ಪರಿಣಾಮ ವಿದ್ಯುತ್ ಶಾಕ್ನಿಂದ ಮೈ ತುಂಬಾ ಗಂಭೀರ ಸುಟ್ಟ ಗಾಯಗಳಾಗಿತ್ತು. ಪರಿಸ್ಥಿತಿ ಗಂಭೀರವಾಗಿ, ಪ್ರಕಾಶ್ ಅವರನ್ನು ತಕ್ಷಣ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಎಸ್‌ಟಿ ಜಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಈ ಘಟನೆ ಸುಂಕದಕಟ್ಟೆ ವಿಭಾಗದ ನಾಡಕೇರಪ್ಪ ಇಂಡ್ಸ್ ಎಸ್ಟೇಟ್, ಬ್ಯಾಡರಹಳ್ಳಿ MUSSನ ಡ್ರಮ್ ಕಾರ್ಖಾನೆಯ ಹತ್ತಿರ ಇರುವ ಬೈರವೇಶ್ವರ ಕೈಗಾರಿಕಾ ಎಸ್ಟೇಟ್ನಲ್ಲಿ ನಡೆದಿದೆ. ದೂರಿನ ಹಿನ್ನೆಲೆಯಲ್ಲಿ ಟಿಸಿ ನಂಬರ್ 848 ಅನ್ನು ದುರಸ್ತಿ ಮಾಡಲು ಪ್ರಕಾಶ್ ಬಂದಿದ್ದರು. ಈ ವೇಳೆ ವಿದ್ಯುತ್ ಶಾಕ್ನಿಂದ ಅವಘಡ ಸಂಭವಿಸಿದೆ.
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಈ ಒಂದು ದುರ್ಘಟನೆ ಸಂಭವಿಸಿದೆ. ದುರಸ್ಥಿ ಮಾಡುವಾಗ ಅನುಸರಿಸಬೇಕಾದ ಮುನ್ನೆಚ್ಛರಿಕಾ ಕ್ರಮಗಳನ್ನು ಅನುಸರಿಸದೇ ಇದ್ದುದ್ದರಿಂದ 11 ಕೆವಿ ಸಾಮರ್ಥ್ಯದ ಟಾನ್ಸ್ಫಾರ್ಮರ್ನಲ್ಲಿ ಸಂಭವಿಸಿದ ವಿದ್ಯುತ್ ಶಾಕ್ನಿಂದ ಮೈತುಂಬಾ ಸುಟ್ಟು ಹೋಗಿತ್ತು. ಈ ನೋವಿನಿಂದ ಪ್ರಕಾಶ್ ನರಳಾಡುತ್ತಿದ್ದರು. ಇದೀಗ ಪ್ರಕಾಶ್ ಸಾವಿಗಿಡಾಗಿದ್ದಾರೆ.
ಬೆಸ್ಕಾಂ ನಿರ್ಲಕ್ಷ್ಯ: ಟಿಸಿ ರಿಪೇರಿ ಮಾಡುವಾಗ ವಿದ್ಯುತ್ ಶಾಕ್, ಸುಟ್ಟಗಾಯಗಳಿಂದ ಪವರ್ ಮ್ಯಾನ್ ನರಳಾಟ


