Greater Bengaluru News9 : ಆಧಾರ್ ಕಾರ್ಡ್ ಇದ್ದರೆ ಎಲ್ಲಿಗೆ ಬೇಕಾದರೂ ಉಚಿತವಾಗಿ ಹೋಗಬಹುದು ಎಂಬ ಭಾವನೆಯಿಂದ 13 ವರ್ಷದ ಬಾಲಕಿ ತನ್ನ 9 ವರ್ಷದ ತಮ್ಮನೊಂದಿಗೆ ಮನೆ ಬಿಟ್ಟು ತೆರಳಿದ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ಅಶ್ವತ್ಥನಗರದಲ್ಲಿ ನಡೆದಿದೆ.
ಟ್ಯೂಷನ್‌ಗೆ ಹೋಗಲ್ಲ ಎಂದು ಮಕ್ಕಳಿಗೆ ಪೋಷಕರು ಬೈದ ಹಿನ್ನೆಲೆಯಲ್ಲಿ ಕೋಪಗೊಂಡ ಅಕ್ಕ-ತಮ್ಮ 1ರಂದು ಸಂಜೆ ಸುಮಾರು 3 ಗಂಟೆ ವೇಳೆಗೆ ಮನೆ ಬಿಟ್ಟು ಹೊರಟಿದ್ದಾರೆ.
13 ವರ್ಷದ ಬಾಲಕಿಗೆ ಆಧಾರ್ ಕಾರ್ಡ್ ಇದ್ದ ಕಾರಣ ಉಚಿತ ಪ್ರಯಾಣ ಮಾಡಿಕೊಂಡು, 9 ವರ್ಷದ ಬಾಲಕನು ಟಿಕೆಟ್ ಪಡೆಯದೇ ಪ್ರಯಾಣ ಮಾಡಿದ್ದಾನೆ. ಈ ವೇಳೆ ಮಕ್ಕಳು ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವು ಭಾಗಗಳಿಗೆ ಸುತ್ತಾಟ ನಡೆಸಿದ್ದಾರೆ ಎನ್ನಲಾಗಿದೆ.
ಮಕ್ಕಳು ಕಾಣೆಯಾಗಿರುವ ಬಗ್ಗೆ ಪೋಷಕರು ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ವೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಮಕ್ಕಳ ಫೋಟೋಗಳನ್ನು ಹಂಚಿಕೊಂಡಿದ್ದರು.
ಈ ಫೋಟೋಗಳನ್ನು ಗಮನಿಸಿದ ಸಾರ್ವಜನಿಕರು ಚಿತ್ರದುರ್ಗದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದು, ಹೆಚ್ಎಎಲ್ ಪೊಲೀಸರು ಮಕ್ಕಳನ್ನು ಠಾಣೆಗೆ ಕರೆತಂದು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಸ್ಪಂದಿಸಿದ ಪೊಲೀಸ್ ಇಲಾಖೆ ಮತ್ತು ಸಹಕಾರ ನೀಡಿದ ಸಾರ್ವಜನಿಕರಿಗೆ ಪೋಷಕರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.


