Greater Bengaluru News9 : ಪೋಡಿ ಮಾಡಿ ಖಾತೆ ಮಾಡಿಸಿಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬನಿಂದ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ರೆವಿನ್ಯೂ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಘಟನೆ ಮಳವಳ್ಳಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಇಂದು ನಡೆದಿದೆ.
ಹಲಗೂರು ಹೋಬಳಿ ರೆವಿನ್ಯೂ ಇನ್ಸ್ಪೆಕ್ಟರ್ ಮಧುಸೂದನ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದವರು. ದಳವಾಯಿಕೊಡಹಳ್ಳಿ ಗ್ರಾಮದ ನಂಜುಂಡಸ್ವಾಮಿ ಅವರಿಗೆ ದಳವಾಯಿಕೋಡಹಳ್ಳಿ ಗ್ರಾಮದ ಸರ್ವೇ ನಂಬರ್ 72ರಲ್ಲಿ ಇರುವ 5 ಎಕರೆ 28 ಗುಂಟೆ ಇನಾಮಿ ಜಮೀನನ್ನು ಪೋಡಿ ಮಾಡಿ ಖಾತೆ ಮಾಡಿಕೊಡಲು ಮಧುಸೂದನ್ ಎಕರೆಗೆ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ದೂರಲಾಗಿತ್ತು.
ನಂಜುಂಡಸ್ವಾಮಿ ಅವರ ತಾಯಿ ಕೆಂಪಮ್ಮ ಹೆಸರಿನಲ್ಲಿರುವ 12 ಗುಂಟೆ ಜಮೀನನ್ನು ಪೋಡಿ ಮಾಡಿ ಖಾತೆ ಮಾಡಲು ಮಧುಸೂದನ್ ಅವರು ಲಂಚ ಕೇಳಿದ್ದಾರೆ. ಲೋಕಾಯುಕ್ತರಿಗೆ ದೂರು ನೀಡಿದ ಹಿನ್ನಲೆ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು, ಡಿವೈಎಸ್ಪಿ ಸುನೀಲ್ ಕುಮಾರ್, ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಬ್ಯಾಡರ ಗೌಡ ತಂಡ ಮಧುಸೂದನ್ ಅವರು 10 ಸಾವಿರ ರೂ. ಮುಂಗಡವನ್ನು ಪಡೆಯುವಾಗ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಸಿದ್ದಲಿಂಗಸ್ವಾಮಿ ಶರತ್, ಮಹದೇವ, ಮಾನಸ, ಶ್ರೀದೇವಿ ತಂಡದಲ್ಲಿದ್ದರು.


