BBMP
Loading ...

KSLECA

Greater Bengaluru News9 : ರಾಜ್ಯದ ಸಾರ್ವಜನಿಕ ಸ್ವಾಮ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಜೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ (Distribution License) ಕೋರಿ ಮುಂಬೈ ಮೂಲದ ‘ದಿ ಟಾಟಾ ಪವರ್ ಕಂಪನಿ ಲಿಮಿಟೆಡ್’ ಅರ್ಜಿ ಸಲ್ಲಿಸಿರುವುದು ಈಗ ತೀವ್ರ ವಿವಾದಕ್ಕೆ ಈಡುಮಾಡಿದೆ. ಕರ್ನಾಟಕದ ಕೋಟ್ಯಂತರ ನಾಗರಿಕರ ಮತ್ತು ರೈತರ ಹಿತ ಕಾಯುತ್ತಿರುವ ವಿದ್ಯುತ್ ವಲಯವನ್ನು ಕಾರ್ಪೊರೇಟ್ ಸಂಸ್ಥೆಗಳ ಪಾಲಾಗಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದ್ದು, ಟಾಟಾ ಪವರ್‌ನ ಈ ಕ್ರಮವನ್ನು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಕಟುವಾಗಿ ಖಂಡಿಸಿದೆ. ರಾಜ್ಯದ ಜನತೆಯ ಆಸ್ತಿಯಾಗಿರುವ ಸಾರ್ವಜನಿಕ ರಂಗದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಈ ಹಿಂಬಾಗಿಲ ಯತ್ನವು ಗ್ರಾಹಕರ ಹಾಗೂ ಸ್ಥಳೀಯ ಉದ್ಯೋಗಿಗಳ ಹಿತಾಸಕ್ತಿಗೆ ಮಾರಕವಾಗಿದೆ.

ವರ್ಷಗಳಿಂದ ಕಷ್ಟಪಟ್ಟು ಕಟ್ಟಿಬೆಳೆಸಿದ ರಾಜ್ಯದ ವಿದ್ಯುತ್ ಜಾಲವನ್ನು ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ಧಾರೆ ಎರೆಯಲು ಹೊರಟಿರುವುದು ಆಡಳಿತಶಾಹಿಯ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಲಾಭದಾಯಕ ಜಿಲ್ಲೆಗಳು ಮತ್ತು ಕೈಗಾರಿಕಾ ವಲಯಗಳನ್ನು ಮಾತ್ರ ಗುರಿಯಾಗಿಸಿಕೊಂಡು ಖಾಸಗಿ ಕಂಪನಿಗಳು ಲಾಭ ಮಾಡಲು ಇಂತಹ ಅರ್ಜಿಗಳನ್ನು ಸಲ್ಲಿಸುತ್ತಿವೆ. ಒಂದು ವೇಳೆ ಖಾಸಗಿ ಕಂಪನಿಗಳಿಗೆ ವಿತರಣಾ ಹಕ್ಕು ಸಿಕ್ಕರೆ, ಅವರು ಕೇವಲ ಶ್ರೀಮಂತ ಮತ್ತು ಕೈಗಾರಿಕಾ ಗ್ರಾಹಕರಿಗೆ ಮಾತ್ರ ಆದ್ಯತೆ ನೀಡಿ, ಗ್ರಾಮೀಣ ಭಾಗದ ಬಡ ಗ್ರಾಹಕರನ್ನು ಮತ್ತು ರೈತರ ಉಚಿತ ವಿದ್ಯುತ್ ಯೋಜನೆಗಳನ್ನು ಮೂಲೆಗುಂಪು ಮಾಡುವ ಅಪಾಯ ದಟ್ಟವಾಗಿದೆ. ಸಾರ್ವಜನಿಕ ಆಸ್ತಿಯನ್ನು ಕಾರ್ಪೊರೇಟ್ ಶಕ್ತಿಗಳಿಗೆ ಒಪ್ಪಿಸುವ ಇಂತಹ ನೀತಿಗಳು ರಾಜ್ಯದ ಆರ್ಥಿಕ ಸ್ವಾವಲಂಬನೆಗೆ ಕೊಡಲಿ ಪೆಟ್ಟು ನೀಡಲಿವೆ.

ಈ ಅಪಾಯಕಾರಿ ಬೆಳವಣಿಗೆಯ ವಿರುದ್ಧ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ. ರಮೇಶ್ ಅವರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಇಂತಹ ಜನವಿರೋಧಿ ನೀತಿಗಳಿಗೆ ಮಣಿಯಬಾರದು ಎಂದು ಆಗ್ರಹಿಸಿದ್ದಾರೆ. ರಾಜ್ಯದ ಸಾವಿರಾರು ಸ್ಥಳೀಯ ವಿದ್ಯುತ್ ಗುತ್ತಿಗೆದಾರರು ಮತ್ತು ಕಾರ್ಮಿಕರು ಎಸ್ಕಾಂಗಳ (ESCOMs) ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಈಗ ಇದ್ದಕ್ಕಿದ್ದಂತೆ ಮುಂಬೈ ಮೂಲದ ಕಂಪನಿಯೊಂದಕ್ಕೆ ಮಣೆ ಹಾಕಿದರೆ, ಸ್ಥಳೀಯ ಗುತ್ತಿಗೆದಾರರ ಬದುಕು ಬೀದಿಗೆ ಬೀಳಲಿದೆ. ಖಾಸಗೀಕರಣದ ಈ ಪ್ರಯತ್ನದಿಂದ ಸ್ಥಳೀಯ ಗುತ್ತಿಗೆದಾರರ ಕಾರ್ಯಕ್ಕೆ, ಅವರ ಹಕ್ಕುಗಳಿಗೆ ಅಥವಾ ಉದ್ಯೋಗಾವಕಾಶಗಳಿಗೆ ಕಿಂಚಿತ್ತೂ ಧಕ್ಕೆಯಾದರೆ ಇಡೀ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸುವುದಾಗಿ ಸಿ. ರಮೇಶ್ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ.

ರಾಜ್ಯ ಸರ್ಕಾರವು ಈ ಕೂಡಲೇ ಜಾಗೃತಗೊಂಡು ಟಾಟಾ ಪವರ್‌ನ ಅರ್ಜಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕಿದೆ. ಸಾರ್ವಜನಿಕ ವಲಯದ ಕಂಪನಿಗಳನ್ನು ಬಲಪಡಿಸುವ ಬದಲು, ಅವುಗಳನ್ನು ದುರ್ಬಲಗೊಳಿಸಿ ಖಾಸಗಿಯವರಿಗೆ ಹಸ್ತಾಂತರಿಸುವ ಯಾವುದೇ ಪ್ರಯತ್ನ ನಡೆದರೂ ಅದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತದೆ. ಗ್ರಾಹಕರಿಗೆ ಹೊರೆಯಾಗುವ ಮತ್ತು ಸ್ಥಳೀಯ ಉದ್ಯಮಗಳನ್ನು ನಾಶಮಾಡುವ ಇಂತಹ ಲೂಟಿ ನೀತಿಗಳ ವಿರುದ್ಧ ಗುತ್ತಿಗೆದಾರರ ಸಂಘವು ನ್ಯಾಯಾಲಯದ ಮಟ್ಟದಲ್ಲೂ ಮತ್ತು ಬೀದಿಗಿಳಿದು ಹೋರಾಡಲು ಸಿದ್ಧವಾಗಿದೆ. ಸರ್ಕಾರ ಜನರ ಹಿತ ಕಾಯುತ್ತದೋ ಅಥವಾ ಕಾರ್ಪೊರೇಟ್ ಕಂಪನಿಗಳ ಹಿತ ಕಾಯುತ್ತದೋ ಎಂಬುದನ್ನು ಈಗ ಸ್ಪಷ್ಟಪಡಿಸಬೇಕಿದೆ ಎಂದು ರಮೇಶ್​ ಅವರು ಆಗ್ರಹಿಸಿದ್ದಾರೆ.

ಸರ್ಕಾರದ ಪ್ರಯತ್ನ ಮುಂದುವರಿದರೆ ಮುಂದಿನ ದಿನಗಳಲ್ಲಿ ವಿದ್ಯುತ್​ ಗುತ್ತಿದೆದಾರರ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಸಂಘವು ಖಡಕ್​ ಎಚ್ಚರಿಕೆ ನೀಡಿದ್ದು, ಸಂಘದ ಎಲ್ಲ ಪದಾಧಿಕಾರಿಗಳು ಖಾಸಗೀಕರಣದ ವಿರುದ್ಧ ಧ್ವನಿಗೂಡಿಸಿದ್ದಾರೆ ಎಂದ ವಿದ್ಯುತ್​ ಗುತ್ತಿಗೆದಾರರ ಸಂಘದ ಹೋರಾಟ ಸಮಿತಿಯ ಚೇರ್ಮನ್​ ವೈ.ಎಚ್​. ಆನಂದ್​ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *