BBMP
Loading ...

Greater Bengaluru News9 : ರಾಜ್ಯದ ಜನತೆಗೆ ಹಾಗೂ ಉದ್ಯಮಗಳಿಗೆ ಸುಗಮವಾಗಿ ಮತ್ತು ತ್ವರಿತವಾಗಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕೇಂದ್ರ ಸರ್ಕಾರದ ‘ನಿಯಮಾವಳಿಗಳ ಸಡಿಲಿಕೆ ಕೋಶ’ (Deregulation Cell) ನೀಡಿರುವ ಶಿಫಾರಸುಗಳ ಅನ್ವಯ, ‘ಕಾಂಪ್ಲಿಯನ್ಸ್ ರಿಡಕ್ಷನ್ ಅಂಡ್ ಡಿರೆಗ್ಯುಲೇಶನ್ ಡಾಕೆಟ್ – ಫೇಸ್ II’ (Compliance Reduction and Deregulation Docket – Phase II) ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲು ಇಂಧನ ಇಲಾಖೆ ತೀವ್ರ ಕಸರತ್ತು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಮುಖ್ಯ ವಿದ್ಯುತ್ ಪರಿವೀಕ್ಷಕರಿಗೆ ಪತ್ರ ಬರೆದಿದ್ದು, ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗ್ರಾಹಕರಿಗೆ ತೊಂದರೆಯಾಗದಂತೆ ಉತ್ತಮ ಸೇವೆ ಒದಗಿಸಲು ಆಂಧ್ರಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ, ತ್ರಿಪುರ ಮತ್ತು ಪಶ್ಚಿಮ ಬಂಗಾಳದಂತಹ ಇತರೆ ರಾಜ್ಯಗಳು ಅಳವಡಿಸಿಕೊಂಡಿರುವ ಅತ್ಯುತ್ತಮ ಕಾರ್ಯವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಲು ಸರ್ಕಾರ ತಿಳಿಸಿದೆ. . ಆಯಾ ರಾಜ್ಯಗಳ ಇಂಧನ ಇಲಾಖೆಗಳು ಹೊರಡಿಸಿರುವ ಅಧಿಕೃತ ಆದೇಶಗಳು ಮತ್ತು ಅಧಿಸೂಚನೆಗಳನ್ನು ಪರಿಶೀಲಿಸಿ, ಅವುಗಳಲ್ಲಿನ ಗ್ರಾಹಕ ಸ್ನೇಹಿ ನಿಯಮಗಳನ್ನು ನಮ್ಮ ರಾಜ್ಯದಲ್ಲಿಯೂ ತರಲು ಸಾಧ್ಯವೇ ಎಂಬ ಬಗ್ಗೆ ಸೂಕ್ತ ಅಭಿಪ್ರಾಯ ಹಾಗೂ ಪ್ರಸ್ತಾವನೆಗಳನ್ನು ಸಿದ್ಧಪಡಿಸುವಂತೆ ಬೆಸ್ಕಾಂಗೆ ಜವಾಬ್ದಾರಿ ವಹಿಸಲಾಗಿದೆ.

ಮುಖ್ಯವಾಗಿ ರಾಜಸ್ಥಾನ ರಾಜ್ಯದಲ್ಲಿ ಜಾರಿಯಲ್ಲಿರುವಂತೆ, 33 ಕೇವಿಯರೆಗಿನ (kV) ವಿದ್ಯುತ್ ಸಂಪರ್ಕ ಹೊಂದಿರುವ ಗ್ರಾಹಕರು ಅಥವಾ ಮಾಲೀಕರು ವಿದ್ಯುತ್ ಸುರಕ್ಷತೆಗೆ ಸಂಬಂಧಿಸಿದಂತೆ ಸ್ವಯಂ ದೃಢೀಕರಣ (Self-Certification) ಮಾಡಿಕೊಳ್ಳಲು ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ. ಆದರೆ, 15 ಮೀಟರ್‌ಗಿಂತ ಎತ್ತರವಿರುವ ಬಹುಮಹಡಿ ಕಟ್ಟಡಗಳು, ಚಿತ್ರಮಂದಿರಗಳು, ಆಸ್ಪತ್ರೆಗಳು, ಮಾಲ್‌ಗಳು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಸೇರುವ ಕಡೆಗಳಲ್ಲಿ ಕಡ್ಡಾಯವಾಗಿ ವಿದ್ಯುತ್ ಪರಿವೀಕ್ಷಕರ (Electrical Inspector) ಪ್ರಮಾಣಪತ್ರ ಇರಬೇಕೆಂಬ ನಿಯಮವನ್ನೂ ಇಲ್ಲಿ ಗಮನಿಸಲಾಗಿದೆ. ಇದರೊಂದಿಗೆ 1 ಎಂವಿಎ (MVA) ವರೆಗಿನ ನವೀಕರಿಸಬಹುದಾದ ಇಂಧನ ಘಟಕಗಳಿಗೂ ಸ್ವಯಂ ದೃಢೀಕರಣದ ಆಯ್ಕೆ ನೀಡುವ ಸಾಧ್ಯತೆಗಳಿವೆ.

ಇನ್ನೊಂದೆಡೆ, ತ್ರಿಪುರ ರಾಜ್ಯದ ಮಾದರಿಯನ್ನು ಪರಿಶೀಲಿಸಲಾಗುತ್ತಿದ್ದು, ಅಲ್ಲಿ 150 ಕಿಲೋವ್ಯಾಟ್ (kW) ವರೆಗಿನ ವಿದ್ಯುತ್ ಲೋಡ್ ಹೊಂದಿರುವ ಉದ್ಯಮ ಅಥವಾ ನಿವಾಸಿಗಳಿಗೆ ಸಂಪರ್ಕ ನೀಡುವ ಮುನ್ನ ಸ್ಥಳ ಪರಿಶೀಲನೆ (Field Inspection) ನಡೆಸುವ ಅಗತ್ಯವಿರುವುದಿಲ್ಲ. ಅಷ್ಟೇ ಅಲ್ಲದೆ, ಇಂತಹ ಗ್ರಾಹಕರು ಇಂಟರ್ನಲ್ ವೈರಿಂಗ್ ಮತ್ತು ವಿದ್ಯುತ್ ಸುರಕ್ಷತೆಗಾಗಿ ಲೈಸೆನ್ಸ್ ಪಡೆದ ಎಲೆಕ್ಟ್ರಿಕಲ್ ಗುತ್ತಿಗೆದಾರರಿಂದ ಯಾವುದೇ ಟೆಸ್ಟ್ ರಿಪೋರ್ಟ್ ಸಲ್ಲಿಸುವ ಕಡ್ಡಾಯ ನಿಯಮವೂ ಅಲ್ಲಿಲ್ಲ. ಕೇವಲ ಮಾಲೀಕರ ಸ್ವಯಂ ಘೋಷಣೆಯ ಆಧಾರದ ಮೇಲೆಯೇ ನಿಗದಿತ ಶುಲ್ಕ ಪಡೆದು ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ. ಇದೇ ಮಾದರಿಯನ್ನು ಕರ್ನಾಟಕದಲ್ಲಿಯೂ ಅಳವಡಿಸಿಕೊಳ್ಳುವ ಬಗ್ಗೆ ಇಲಾಖೆ ಚಿಂತನೆ ನಡೆಸಿದೆ.

ಈ ಇಡೀ ಸುಧಾರಣಾ ಪ್ರಕ್ರಿಯೆಯನ್ನು ಅತ್ಯಂತ ಸಮಯಬದ್ಧವಾಗಿ ಮುಗಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾದ ಡಾ. ಶಾಲಿನಿ ರಜನೀಶ್ ಅವರು ಕಡಕ್ ಆದೇಶ ನೀಡಿದ್ದಾರೆ. ಇತರೆ ರಾಜ್ಯಗಳ ಉತ್ತಮ ಅಭ್ಯಾಸಗಳನ್ನು ಗುರುತಿಸಿ, ಅಗತ್ಯವಿದ್ದರೆ ಸಂಬಂಧಿತ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರಲು ಸಚಿವ ಸಂಪುಟದ (Cabinet) ಅನುಮೋದನೆ ಪಡೆಯಲು ಸೂಚಿಸಲಾಗಿದೆ. ಈ ಎಲ್ಲಾ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ, ಮಾನ್ಯ ಇಂಧನ ಸಚಿವರ ಒಪ್ಪಿಗೆಯೊಂದಿಗೆ ದಿನಾಂಕ 31.05.2026 ರೊಳಗಾಗಿ ಅಂತಿಮ ವರದಿಯನ್ನು ಸಲ್ಲಿಸುವಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಗಡುವು ವಿಧಿಸಲಾಗಿದೆ.

Leave a Reply

Your email address will not be published. Required fields are marked *