BBMP
Loading ...

Basavanna KPTCL

Greater Bengaluru News9 : ರಾಜ್ಯದ ಸಾರ್ವಜನಿಕ ಸ್ವಾಮ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಜೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ (Distribution License) ಕೋರಿ ಮುಂಬೈನ ‘ದಿ ಟಾಟಾ ಪವರ್ ಕಂಪನಿ ಲಿಮಿಟೆಡ್’ ಅರ್ಜಿ ಸಲ್ಲಿಸಿರುವುದನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಒಕ್ಕೂಟವು ಅತ್ಯಂತ ಕಟುವಾದ ಶಬ್ದಗಳಲ್ಲಿ ಖಂಡಿಸಿದೆ. ರಾಜ್ಯದ ಜನತೆಯ ಆಸ್ತಿಯಾಗಿರುವ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವ ಈ ಹಿಂಬಾಗಿಲ ಯತ್ನವು ಗ್ರಾಹಕರ ಹಾಗೂ ನೌಕರರ ಹಿತಾಸಕ್ತಿಗೆ ಮಾರಕ ಎಂದು ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.

ಖಾಸಗೀಕರಣದಿಂದ ಉಂಟಾಗುವ ಗಂಭೀರ ಪರಿಣಾಮಗಳನ್ನು ಉಲ್ಲೇಖಿಸಿ ಒಕ್ಕೂಟವು ಪ್ರಮುಖ ಆಕ್ಷೇಪಣೆಗಳನ್ನು ಎತ್ತಿದೆ:

  • ಸಾರ್ವಜನಿಕ ಆಸ್ತಿ ಲೂಟಿಯ ಆತಂಕ: ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾಗಿರುವ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವಿತರಣಾ ಜಾಲ, ಉಪಕೇಂದ್ರಗಳು ಹಾಗೂ ಮೂಲಸೌಕರ್ಯಗಳನ್ನು ಸಿದ್ಧವಾಗಿಟ್ಟುಕೊಂಡು, ಲಾಭದ ಆಸೆಗೆ ಪರರಾಜ್ಯದ ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಿಕೊಡುವುದು ಅಕ್ಷಮ್ಯ ಅಪರಾಧ ಎಂದು ಒಕ್ಕೂಟ ಹೇಳಿದೆ.
  • ಗ್ರಾಮೀಣ ಜನತೆಗೆ ವಂಚನೆ: ಖಾಸಗಿ ಕಂಪನಿಗಳ ಏಕೈಕ ಧೈಯ “ಲಾಭಾಂಶ” ಆಗಿರುವುದರಿಂದ, ಅವರು ಕೇವಲ ಕೈಗಾರಿಕೆ ಮತ್ತು ವಾಣಿಜ್ಯ ವಲಯದಂತಹ ಹೆಚ್ಚು ಲಾಭ ತರುವ ನಗರ ಪ್ರದೇಶಗಳ ಮೇಲೆ ಕಣ್ಣಿಡುತ್ತಾರೆ. ಇದರಿಂದ ಸರ್ಕಾರಿ ಎಸ್ಕಾಂಗಳು ತೀವ್ರ ನಷ್ಟ ಅನುಭವಿಸಿ, ಗ್ರಾಮೀಣ ವಿದ್ಯುತ್ ಜಾಲ ಸಂಪೂರ್ಣ ಕುಸಿಯುವ ಅಪಾಯವಿದೆ.
  • ಜನಕಲ್ಯಾಣ ಯೋಜನೆಗಳಿಗೆ ಕೊಡಲಿ ಪೆಟ್ಟು: ರೈತರ ಉಚಿತ ಪಂಪ್‌ಸೆಟ್ ವಿದ್ಯುತ್, ಗೃಹಜ್ಯೋತಿ, ಭಾಗ್ಯಜ್ಯೋತಿ ಹಾಗೂ ಕುಟೀರಜ್ಯೋತಿಯಂತಹ ಬಡವರ ಯೋಜನೆಗಳ ಹಿಂದೆ ಸರ್ಕಾರಿ ನೌಕರರ ಶ್ರಮವಿದೆ. ಖಾಸಗಿ ಕಂಪನಿಗಳು ಇಂತಹ ಯಾವುದೇ ಸಾಮಾಜಿಕ ಬದ್ಧತೆಯ ಯೋಜನೆಗಳನ್ನು ಅನುಷ್ಠಾನಗೊಳಿಸುವುದಿಲ್ಲ.
  • ದರ ಏರಿಕೆಯ ಬರೆ: ಖಾಸಗೀಕರಣಗೊಂಡರೆ ಸ್ಮಾರ್ಟ್ ಮೀಟರ್ ನೆಪದಲ್ಲಿ ಮನಬಂದಂತೆ ದರ ಹೆಚ್ಚಳ ಮಾಡಿ, ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರನ್ನು ಶೋಷಿಸುವುದು ಗ್ಯಾರಂಟಿ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.
  • ಉದ್ಯೋಗದ ಅಭದ್ರತೆ: ಇಲಾಖೆಯಲ್ಲಿ ಈಗಾಗಲೇ 35,000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಖಾಸಗೀಕರಣದಿಂದಾಗಿ ಹೊಸ ಉದ್ಯೋಗ ಸೃಷ್ಟಿ ನಿಲ್ಲುವುದಲ್ಲದೆ, ಪ್ರಸ್ತುತ ಇರುವ ಗುತ್ತಿಗೆ, ಹೊರಗುತ್ತಿಗೆ ಹಾಗೂ ಕಾಯಂ ನೌಕರರ ಉದ್ಯೋಗದ ಭದ್ರತೆಗೆ ಧಕ್ಕೆಯಾಗಲಿದೆ.

ಒಕ್ಕೂಟದ ಅಂತಿಮ ಎಚ್ಚರಿಕೆ:
ರಾಜ್ಯದಲ್ಲಿ ಅದ್ಭುತ ತಾಂತ್ರಿಕ ಸಾಮರ್ಥ್ಯ ಹಾಗೂ ಮೂಲಸೌಕರ್ಯ ಇರುವಾಗ ಪರರಾಜ್ಯದ ಖಾಸಗಿ ಸಂಸ್ಥೆಗೆ ಕರ್ನಾಟಕದ ವಿದ್ಯುತ್ ಕ್ಷೇತ್ರವನ್ನು ಹಸ್ತಾಂತರಿಸಲು ಬಿಡುವುದಿಲ್ಲ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC) ಟಾಟಾ ಪವರ್ ಸಂಸ್ಥೆಯ ಅರ್ಜಿಯನ್ನು ತಕ್ಷಣವೇ ತಿರಸ್ಕರಿಸಬೇಕು. ಒಂದು ವೇಳೆ ಖಾಸಗಿ ಸಂಸ್ಥೆಗೆ ಅನುಮತಿ ನೀಡಲು ಮುಂದಾದಲ್ಲಿ, ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದರೊಂದಿಗೆ ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕವಿಮಂ ನೌಕರರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಕೆ. ಬಲರಾಮ್ ಹಾಗೂ ಕಮಿಮಂ ಇಂಜಿನಿಯರ್​ಗಳ ಒಕ್ಕೂಟದ ಅಧ್ಯಕ್ಷರಾದ ಬಸವಣ್ಣ ಸಿ. ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *