Greater Bengaluru News9 : ಗಂಗಾಕಲ್ಯಾಣ ಯೋಜನೆಯ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಪರಿವರ್ತಕ ಅಳಡಿಸಿದ ಕಾಮಗಾರಿಯ ಬಿಲ್ ಪಾವತಿಗೆ ₹1,000 ಲಂಚ ಪಡೆಯುತ್ತಿದ್ದ ‘ಬೆಸ್ಕಾಂ’ ಕಚೇರಿಯ ಆಂತರಿಕ ಲೆಕ್ಕಪರಿಶೋಧನಾ ವಿಭಾಗದ ಅಕೌಂಟ್ಸ್ ಆಫೀಸರ್ ಎಂ.ಡಿ. ಮಾಳಪುರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಲೆಕ್ಕಾಧಿಕಾರಿಯನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಧಿಕಾರಿ ವಿರುದ್ಧ ಚನ್ನಗಿರಿಯ ವಿದ್ಯುತ್ ಗುತ್ತಿಗೆದಾರ ಎ. ಸಂದೀಪ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
‘ಗಂಗಾಕಲ್ಯಾಣ ಯೋಜನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಹಾಗೂ ಸ್ಥಳೀಯ ಅಭಿವೃದ್ಧಿ ಯೋಜನೆಯಡಿ ಕೊಳವೆಬಾವಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುತ್ತಿಗೆಯನ್ನು ಸಂದೀಪ್ ಪಡೆದಿದ್ದರು. * 3.93 ಲಕ್ಷದ ಬಿಲ್ ಪಾವತಿಗೆ ಲೆಕ್ಕಾಧಿಕಾರಿ ಎಂ.ಡಿ. ಮಾಳಪುರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಾಪೂರೆ ತಿಳಿಸಿದ್ದಾರೆ.
ಲಂಚ ನೀಡಲು ಇಷ್ಟಪಡದ ಗುತ್ತಿಗೆದಾರ ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಿದ್ದರು. ‘ಬೆಸ್ಕಾಂ’ ಕಚೇರಿಯಲ್ಲಿ ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ವಶಕ್ಕೆ ಪಡೆದರು.


