Greater Bengaluru News9 : ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡುವುದಕ್ಕೆ ಕರ್ನಾಟಕ ಸರ್ಕಾರವು ಅವಕಾಶ ಮಾಡಿಕೊಟ್ಟಿದೆ. ಆದರೆ ಈ ವಿಚಾರದಲ್ಲಿ ಇಂದಿಗೂ ಹಲವು ಗೊಂದಲಗಳು ಮುಂದುವರಿದಿವೆ. ಅಲ್ಲದೆ ಸಣ್ಣ ಹಾಗೂ ಮಧ್ಯಮ ವರ್ಗದ ಆಸ್ತಿದಾರರು ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.
ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ದುಬಾರಿ ಮೊತ್ತದ ಹಣ ಪಾವತಿ ಮಾಡಬೇಕಾದ ಅನಿವಾರ್ಯತೆ ಇರುವುದು ಸಹ ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಗಂಭೀರವಾಗಿ ಚರ್ಚೆ ಆಗಿದೆ. ವಿಧಾನಸಭೆಯಲ್ಲಿ ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಸಂಬಂಧಿಸಿದಂತೆ ನಡೆದ ಚರ್ಚೆ ಏನು ಎನ್ನುವ ವಿವರ ಇಲ್ಲಿದೆ.
ಕರ್ನಾಟಕ ಸರ್ಕಾರವು ಕಳೆದ ವರ್ಷದಿಂದ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಇಂದಿಗೂ ಇದರಲ್ಲಿನ ಗೊಂದಲಗಳು ಮುಗಿಯುತ್ತಿಲ್ಲ. ಇದೀಗ ಈ ವಿಚಾರವು ವಿಧಾನಸಭೆಯಲ್ಲೂ ಗಂಭೀರವಾದ ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ನಗರದಲ್ಲಿ ಬಿ ಖಾತೆಗಳನ್ನು ಎ ಖಾತೆಗಳಿಗೆ ಪರಿವರ್ತಿಸುವ ವೇಳೆ, ಈಗಾಗಲೇ ಆಸ್ತಿ ತೆರಿಗೆ ಪಾವತಿಸುತ್ತಿರುವ ಮಾಲೀಕರಿಗೆ ಪ್ರಸ್ತುತ ಮಾರ್ಗಸೂಚಿ ಬೆಲೆಯನ್ನು ಆಧರಿಸಿ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ. ಇದಕ್ಕೆ ಬದಲಾಗಿ, ಆಸ್ತಿ ನೋಂದಣಿ ಸಮಯದ ಮಾರ್ಗಸೂಚಿ ಬೆಲೆಯನ್ನು ಪರಿಗಣಿಸಿ ಕಡಿಮೆ ಶುಲ್ಕ ವಿಧಿಸಿ ಜನರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವಂತೆ ಸದನದಲ್ಲಿ ಬಿಜೆಪಿ ಶಾಸಕ ಡಾ ಸಿ ಎನ್ ಅಶ್ವತ್ಥನಾರಾಯಣ ಅವರು ಆಗ್ರಹಿಸಿದ್ದಾರೆ. ಈ ಸಂಬಂಧ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆಸ್ತಿಗಳನ್ನು ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡುವುದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಡಾ ಸಿ ಎನ್ ಅಶ್ವತ್ಥನಾರಾಯಣ ಅವರು, ಬಿ ಖಾತಾದಿಂದ ಎ ಖಾತಾಗಳನ್ನು ಕಾನೂನು ವ್ಯಾಪ್ತಿಗೆ ತರುತ್ತಿರುವುದು ಒಳ್ಳೆಯದು. ಈ ವಿಚಾರದಲ್ಲಿ ನಾನು ಏನನ್ನೂ ಹೇಳುವುದಿಲ್ಲ. ಆದರೆ, ಕಾನೂನು ಸರಿ ಇದೆ ಆದರೆ, ವಿಧಿಸುತ್ತಿರುವ ಶುಲ್ಕವು ಅತ್ಯಂತ ಅಸಮರ್ಪಕವಾಗಿದೆ ಎಂದು ಅವರು ಹೇಳಿದ್ದಾರೆ.
ಆಸ್ತಿಗಳ ಗೈಡ್‌ಲೈನ್ಸ್ ವ್ಯಾಲ್ಯೂ ಶೇ.150ರಷ್ಟು ಮಾಡಿಕೊಂಡು ಅದಕ್ಕೆ ಶೇ5% ಹಾಗೂ 10% ಹಾಕುತ್ತಿದ್ದೀರಿ. ಇಂದಿನ ಗೈಡ್‌ಲೈನ್ಸ್ ವ್ಯಾಲ್ಯೂಗೆ ಶುಲ್ಕ ವಿಧಿಸಿದರೆ ಹೇಗೆ, ಈ ಹಿಂದೆಯೂ ಹಿಂದಿನ ಸರ್ಕಾರಗಳು ಈ ರೀತಿಯ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಟ್ಟಿವೆ. ಆದರೆ ಈ ರೀತಿಯ ಶುಲ್ಕಗಳನ್ನು ಯಾರೂ ವಿಧಿಸಿರಲಿಲ್ಲ. ಇಷ್ಟೊಂದು ಶುಲ್ಕವನ್ನು ವಿಧಿಸುವುದು ತಪ್ಪು. ಹಳೆಯ ಗೈಡ್‌ಲೈನ್ಸ್ ವ್ಯಾಲ್ಯೂ ಆಧಾರದ ಮೇಲೆ ಶುಲ್ಕ ವಿಧಿಸಿ ಎಂದು ಅವರು ಹೇಳಿದ್ದಾರೆ.


