BBMP
Loading ...

Electricity

Greater Bengaluru News9: ವಾಸಯೋಗ್ಯ ಪ್ರಮಾಣಪತ್ರ ಇಲ್ಲದ ಹೊಸ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ. ಹೀಗಾಗಿ ರಾಜ್ಯದಲ್ಲಿಮನೆ ಕಟ್ಟಿಕೊಂಡ ಬರೊಬ್ಬರಿ 4.34ಲಕ್ಷ ಜನರು ಈಗ ವಿದ್ಯುತ್‌ ಸೌಲಭ್ಯ ಸಿಗದೆ ಕತ್ತಲಲ್ಲೇ ಬದುಕು ಸವೆಸುವ ಸ್ಥಿತಿ ನಿರ್ಮಾಣಗೊಂಡಿದೆ.

ವಿದ್ಯುತ್‌ ಸರಬರಾಜು ಕಂಪನಿಗಳು ಕಟ್ಟಡ ಮುಕ್ತಾಯ ಪ್ರಮಾಣಪತ್ರ (ಸಿಸಿ), ವಾಸಯೋಗ್ಯ ಪ್ರಮಾಣಪತ್ರ (ಒಸಿ) ಹಾಜರುಪಡಿಸಿದ ನಂತರವೇ ಆ ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ನೀಡುತ್ತಿವೆ. ಆದರೆ, ಬಿ ಖಾತಾ ಹಾಗೂ ಗ್ರಾಮಠಾಣಾ ವ್ಯಾಪ್ತಿಯಿಂದ ಹೊರಗಿರುವ ಆಸ್ತಿಗಳಲ್ಲಿನಿರ್ಮಿಸಿದ ಕಟ್ಟಡಗಳಿಗೆ ಒಸಿ, ಸಿಸಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಲ್ಲಿಮನೆ ಕಟ್ಟಿಕೊಂಡ ಹೊಸ ಗ್ರಾಹಕರಿಗೆ ಇದೀಗ ವಿದ್ಯುತ್‌ ಸಂಪರ್ಕ ಪಡೆಯುವುದು ಕಷ್ಟವಾಗಿದೆ.

ಕಳೆದ ಒಂದೂವರೆ ವರ್ಷದಲ್ಲಿ(2025 ಆಗಷ್ಟವರೆಗೆ) ವಿದ್ಯುತ್‌ ಸಂಪರ್ಕ ಕೋರಿ ರಾಜ್ಯದಲ್ಲಿ14.40ಲಕ್ಷ ಹೊಸ ಅರ್ಜಿಗಳು ಬಂದಿವೆ. ಈ ಪೈಕಿ 10.06ಲಕ್ಷ ಮನೆಗಳಿಗೆ ವಿದ್ಯುತ್‌ ಸಂಪರ್ಕ ಸಿಕ್ಕಿದೆ. 2,90,137 ಅರ್ಜಿಗಳು ಬಾಕಿ ಉಳಿದುಕೊಂಡಿದ್ದರೆ 1,44,097 ತಿರಸ್ಕೃತಗೊಂಡಿವೆ. ಹೀಗೆ ಒಟ್ಟು 4,34,234 ಗ್ರಾಹಕರು ವಿದ್ಯುತ್‌ ಸಂಪರ್ಕಕ್ಕಾಗಿ ಕಾದು ಕುಳಿತಿದ್ದಾರೆ. ಸ್ಥಳಿಯ ಸಂಸ್ಥೆಗಳಲ್ಲಿಇಸಿ, ಒಸಿ ಪ್ರಮಾಣಪತ್ರ ಕೋರಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಿದರೆ ಈ ಲೆಕ್ಕ ದುಪ್ಪಟ್ಟಾಗಲಿದೆ.

ರಾಜ್ಯದಲ್ಲಿ1.55 ಕೋಟಿ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಅವರಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ಆದರೆ ಹೊಸ ಗ್ರಾಹಕರಿಗೆ ರಾಜ್ಯದ ಒಟ್ಟು ಗ್ರಾಹಕರು ಬಳಕೆ ಮಾಡುತ್ತಿದ್ದ ವಿದ್ಯುತ್‌ ಪ್ರಮಾಣದ ಸರಾಸರಿ ಲೆಕ್ಕ ಹಾಕಿ ತಿಂಗಳಿಗೆ ಗರಿಷ್ಠ 58 ಯುನಿಟ್‌ ಉಚಿತ ವಿದ್ಯುತ್‌ ನೀಡಲು ಸರಕಾರ ತೀರ್ಮಾನಿಸಿದೆ. ಆದರೆ, ಹಲವು ಹೊಸ ಕಟ್ಟಡಗಳಿಗೆ ಸಿಸಿ, ಒಸಿ ಸಿಗದಿದ್ದರಿಂದ ಉಚಿತ ವಿದ್ಯುತ್‌ ಒಂದೆಡೆ ಇರಲಿ ಗ್ರಾಹಕ ನಿಗದಿತ ಶುಲ್ಕ ಪಾವತಿಸುತ್ತೇನೆಂದರೂ ಸಂಪರ್ಕ ನೀಡಲಾಗುತ್ತಿಲ್ಲಎಂದು ಹೆಸ್ಕಾಂ ಅಧಿಕಾರಿಯೊಬ್ಬರು ವಿಕ ಕ್ಕೆ ತಿಳಿಸಿದ್ದಾರೆ.

ಬಿ ಖಾತಾ ನಿವೇಶನಕ್ಕೆ ಇಲ್ಲಸಿಸಿ, ಒಸಿ
ಎ ಖಾತಾ ಪತ್ರ ನಿವೇಶನ- ಕಟ್ಟಡಗಳ ಕಾನೂನು ಬದ್ಧ ದಾಖಲೆಯಾಗಿದೆ. ಆದರೆ ಬಿ ಖಾತಾ ಆಸ್ತಿಗಳಲ್ಲಿನಿರ್ಮಿಸಿದ ಕಟ್ಟಡಗಳಿಗೆ ಸಿಸಿ, ಒಸಿ ನೀಡಲು ಅವಕಾಶ ಇಲ್ಲ. ಬೆಂಗಳೂರು ಹೊರತುಪಡಿಸಿ ರಾಜ್ಯದ್ಯಂತ ಸರಕಾರ ಇ ಖಾತಾ ಹೊಂದಿರದ ಹಾಗೂ ಇ ಖಾತಾ ಇರುವ 22ಲಕ್ಷ ನಿವೇಶನಗಳು ಸೇರಿದಂತೆ 55ಲಕ್ಷ ಸೈಟ್‌ಗಳಿಗೆ ಬಿ ಖಾತಾ ನೀಡಲು ತೀರ್ಮಾನಿಸಿದೆ. ಹೀಗಾದರೂ ಈ ಆಸ್ತಿಗಳ ಮಾಲೀಕರಿಗೆ ವಿದ್ಯುತ್‌ ಸಂಪರ್ಕ ಅಲಭ್ಯವಾಗಲಿದೆ. ಹೀಗಾಗಿ ಬೆಂಗಳೂರು ವ್ಯಾಪ್ತಿ ಜಾರಿಗೊಳಿಸಿದ ಬಿ ಖಾತಾ ಸೈಟ್‌ಗಳಿಗೆ ಎ ಖಾತಾ ನೀಡುವ ಸೌಲಭ್ಯವನ್ನು ರಾಜ್ಯಾದ್ಯಂತ ವಿಸ್ತರಿಸಬೇಕು ಎಂಬುದು ನಾಗರಿಕರ ಒತ್ತಾಯ. ಅದೇ ರೀತಿ ಹಲವು ವರ್ಷಗಳಿಂದ ಗ್ರಾಮಠಾಣಾ ವ್ಯಾಪ್ತಿ ವಿಸ್ತರಿಸಿಲ್ಲ. ಹೀಗಾಗಿ ಕಂದಾಯ ಜಮೀನುಗಳಲ್ಲಿಬಡಾವಣೆಗಳು ಹುಟ್ಟಿವೆ. ವಿಸ್ತರಣೆಗೊಂಡ ಪ್ರದೇಶಗಳನ್ನು ಗ್ರಾಮಠಾಣಾ ವ್ಯಾಪ್ತಿಗೆ ತಂದು ಇ ಸ್ವತ್ತು ಸೌಲಭ್ಯ ಕಲ್ಪಿಸಿಕೊಡಬೇಕು. ಇದರಿಂದ ವಿದ್ಯುತ್‌ ಸಂಪರ್ಕ ಪಡೆಯುವುದು ಸುಲಭವಾಗಲಿದೆ ಎಂಬುದು ಗ್ರಾಹಕರ ಒತ್ತಾಯ.

Leave a Reply

Your email address will not be published. Required fields are marked *