ಬೆಂಗಳೂರು: ರೆವೆನ್ಯೂ ಸೈಟ್ನಲ್ಲಿ ಕಟ್ಟಡ ನಿರ್ಮಿಸಿದರೆ ಇನ್ನು ಮುಂದೆ ವಿದ್ಯುತ್ ಸಂಪರ್ಕ ಸಿಗುವುದಿಲ್ಲ. ಏಕೆಂದರೆ, ಒಸಿ ಇರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ನೀಡಬೇಕೆಂಬ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಆದೇಶ ಹೊರಡಿಸಿದ್ದು, ಅದನ್ನು ಬೆಸ್ಕಾಂ ಪಾಲಿಸುವುದಾಗಿ ತಿಳಿಸಿದೆ.
ಈ ನಿಯಮಗಳನ್ನು ಜಾರಿ ಮಾಡುವುದಾಗಿ ಬೆಸ್ಕಾಂ ಪ್ರಕಟಣೆ ಹೊರಡಿಸಿದೆ. ಅಲ್ಲದೆ, ಎಲ್ಲ ಎಸ್ಕಾಂಗಳು ಈ ಆದೇಶ ಪಾಲಿಸುವುದಾಗಿ ಶೀಘ್ರದಲ್ಲೇ ಪ್ರಕಟಿಸಲಿವೆ. ನಕ್ಷೆ ಹಾಗೂ ಒಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡದಂತೆ ಕಳೆದ ಡಿಸೆಂಬರ್ನಲ್ಲಿ ಸುಪ್ರಿಂಕೋರ್ಟ್ ಆದೇಶ ಹೊರಡಿಸಿದೆ.
ಈ ಆದೇಶದ ಬೆನ್ನಲ್ಲೇ ಒಸಿ ಇಲ್ಲದೇ ಇದ್ದರೆ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಕೆಇಆರ್ಸಿ ಎಲ್ಲ ಎಸ್ಕಾಂಗಳಿಗೆ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಈ ಆದೇಶವನ್ನು ಪಾಲಿಸಲು ಬೆಸ್ಕಾಂ ಎಲ್ಲ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದೆ. ಎಲ್ಲ ಎಸ್ಕಾಂಗಳೂ ಕೂಡ ಈ ಆದೇಶವನ್ನು ಪಾಲಿಸಲಿವೆ.
ಈ ನಿಯಮದಿಂದ ಆಗುವ ಪರಿಣಾಮ ಏನೆಂದರೆ, ಕಂದಾಯ ನಿವೇಶನ ಮತ್ತು ಬಿ ಖಾತಾ ನಿವೇಶನಗಳಿಗೆ ನಕ್ಷೆ ಮಂಜೂರಾತಿಯನ್ನು ಕೊಡುವಂತಿಲ್ಲ. ನಕ್ಷೆ ಮಂಜೂರಾತಿ ಸಿಗದಿದ್ದರೆ ಆ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ಆ ಕಟ್ಟಡಗಳಿಗೆ ಸಿಗುವುದಿಲ್ಲ. ಇದರಿಂದಾಗಿ ನಿರ್ಮಾಣ ಹಂತದಲ್ಲಿರುವ ಹಾಗೂ ಮುಂದೆ ನಿರ್ಮಿಸಲಾಗುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಸಿಗಲ್ಲ.
ನಕ್ಷೆ ಮಂಜೂರಾತಿ ಇಲ್ಲದೇ ಹೋದರೆ ಇನ್ನು ಮುಂದೆ ಬೆಂಗಳೂರಿನಲ್ಲೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಇರುವುದಿಲ್ಲ. ಇದರಿಂದ ನಿರ್ಮಾಣ ಚಟುವಟಿಕೆಗೆ ಬ್ರೇಕ್ ಬೀಳಲಿದ್ದು, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


