ನವದೆಹಲಿ: ಇಂಟರ್ನೆಟ್ ಬಳಕೆ ಮಾಡದ ಮೊಬೈಲ್ ಬಳಕೆದಾರರ ಆಯ್ಕೆಯ ಹಕ್ಕಿನ ಪರ ಬ್ಯಾಟ್ ಬೀಸಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಡೇಟಾ ಪ್ಲಾನ್ ಇಲ್ಲದ ಕೇವಲ ವಾಯ್ಸ್ ಮತ್ತು ಎಸ್ಎಂಎಸ್ ಒಳಗೊಂಡ ಕಡಿಮೆ ಟಾರಿಫ್ ಪ್ಲಾನ್ ಆರಂಭಿಸುವಂತೆ ಎಲ್ಲ ಟೆಲಿಕಾಂ ಕಂಪನಿಗಳಿಗೆ ಆದೇಶ ಹೊರಡಿಸಿದೆ.
ಸರ್ಕಾರ ಹೊರಡಿಸಿರುವ ಆದೇಶದಿಂದ ಹೆಚ್ಚಾಗಿ ಗ್ರಾಮೀಣ ಭಾಗದ ಜನತೆಗೆ ಅನುಕೂಲಕರವಾಗಲಿದೆ. ಏಕೆಂದರೆ, ಹಳ್ಳಿಗಳಲ್ಲಿ ಬಹುತೇಕರು ಇಂದಿಗೂ ಇಂಟರ್ನೆಟ್ ಬಳಸುವುದಿಲ್ಲ. ಕೆಲವರಿಗಂತೂ ಇಂಟರ್ನೆಟ್ ಬಳಸುವುದು ಕೂಡ ಹೇಗೆಂದು ತಿಳಿದಿಲ್ಲ. ಅಲ್ಲದೆ, ಇನ್ನು ಕೀಪ್ಯಾಡ್ ಮೊಬೈಲ್ ಬಳಸುತ್ತಿರುವವರಿದ್ದಾರೆ. ಪ್ರತಿ ತಿಂಗಳು ರೀಚಾರ್ಜ್ ಮಾಡಿಸಿಕೊಳ್ಳುವಾಗ ಇಂಟರ್ನೆಟ್ ಬಳಸದಿದ್ದರೂ ಅನಿವಾರ್ಯವಾಗಿ ರೀಚಾರ್ಜ್ ಮಾಡಿಸಲೇಬೇಕಿದೆ. ಇದನ್ನು ಮನಗಂಡಿರುವ ಟ್ರಾಯ್ ಇಂಟರ್ನೆಟ್ ಪ್ಲಾನ್ ಬಿಟ್ಟು, ವಾಯ್ಸ್ ಮತ್ತು ಎಸ್ಎಂಎಸ್ ಒಳಗೊಂಡ ಟಾರಿಫ್ ಪ್ಲಾನ್ ಆರಂಭಿಸುವಂತೆ ಟ್ರಾಯ್ ಆದೇಶಿಸಿದೆ.
ಅನೇಕ ಮೊಬೈಲ್ ಕಂಪನಿಗಳು ತಮ್ಮ ಪ್ರತಿ ಟಾರಿಫ್ ಪ್ಲಾನ್ನಲ್ಲಿ ಡೇಟಾ, ವಾಯ್ಸ್ ಮತ್ತು ಎಸ್ಎಂಎಸ್ ಎಲ್ಲವನ್ನು ಒಟ್ಟಿಗೆ ಸೇರಿಸಿವೆ. ಇಂಟರ್ನೆಟ್ ಬಳಸದವರು ಕೂಡ ರೀಚಾರ್ಜ್ಗೆ ಪಾವತಿಸಬೇಕಾಗುತ್ತದೆ. ಈ ನಡೆಯನ್ನು ಟ್ರಾಯ್ ವಿರೋಧಿಸಿದ್ದು, ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡಿದೆ. ಟೆಲಿಕಾಂ ಬಳಕೆದಾರರ ರಕ್ಷಣಾ (12ನೇ ತಿದ್ದುಪಡಿ) ನಿಯಮಗಳು 2025ರ ಪ್ರಕಾರ ಬದಲಾವಣೆ ತರಲು ಟೆಲಿಕಾಂ ಕಂಪನಿಗಳಿಗೆ ಆದೇಶಿಸಿದೆ. ಆದರೆ, ಟ್ರಾಯ್ ಆದೇಶಕ್ಕೆ ಟೆಲಿಕಾಂ ಕಂಪನಿಗಳು ಅಸಮಾಧಾನ ಹೊರಹಾಕಿವೆ. ಟ್ರಾಯ್ನ ಈ ನಿರ್ಧಾರದಿಂದ ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಗೆ ಹಿನ್ನೆಡೆಯಾಗಲಿದೆ ಎಂದಿವೆ.
ಸೆಪ್ಟೆಂಬರ್-ನವೆಂಬರ್ 2022 ಅವಧಿಯಲ್ಲಿ ಗ್ರಾಹಕರ ಸಮೀಕ್ಷೆಯನ್ನು ನಡೆಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಟ್ರಾಯ್ ಹೇಳಿದೆ. ಅಲ್ಲದೆ, ಈ ವಿಚಾರದ ಕುರಿತು ಟೆಲಿಕಾಂ ಆಪರೇಟರ್ಗಳು, ಗ್ರಾಹಕರು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಚರ್ಚೆ ನಡೆಸಿದ್ದು, ಅದಕ್ಕೆ ಸಂಬಂಧಿಸಿದ ಸಮಾಲೋಚನಾ ಪತ್ರವನ್ನು ಸಹ ಟ್ರಾಯ್ ಬಿಡುಗಡೆ ಮಾಡಿದೆ.
ಇಂದಿಗೂ 150 ಮಿಲಿಯನ್ ಮಂದಿ ಸಾಮಾನ್ಯ ಫೋನ್ ಅನ್ನು ಬಳಸುತ್ತಿದ್ದಾರೆ. ಅವರು ಕೇವಲ ಧ್ವನಿ ಮತ್ತು ಎಸ್ಎಂಎಸ್ ಮಾತ್ರ ಬಳಸುತ್ತಿದ್ದಾರೆ ಎಂದು ಹೇಳಿರುವ ಟ್ರಾಯ್, ಎಸ್ಎಂಎಸ್ ಮತ್ತು ವಾಯ್ಸ್ ಪ್ಲಾನ್ ಅನ್ನು ಪ್ರತ್ಯೇಕಿಸಿದರೆ, ಅದರಿಂದ ಹಿರಿಯ ಗ್ರಾಹಕರಿಗೆ ಅದರಲ್ಲೂ ಗ್ರಾಮೀಣ ಭಾಗದ ಹಿರಿಯರಿಗೆ ಅನುಕೂಲವಾಗಲಿದೆ ಎಂದು ಟ್ರಾಯ್ ತಿಳಿಸಿದೆ. ಟ್ರಾಯ್ ಆದೇಶವನ್ನು ಟೆಲಿಕಾಂ ಕಂಪನಿಗಳು ಪಾಲಿಸಿದ್ದಲ್ಲಿ ಇಂಟರ್ನೆಟ್ ಬಳಸದ ಮೊಬೈಲ್ ಬಳಕೆದಾರರಿಗೆ ಅನುಕೂಲವಾಗಲಿದೆ.
ರಾಮನಗರ ಜಿಲ್ಲಾ ದಿಶಾ ಸಮಿತಿಯಲ್ಲಿ ಜೆಡಿಎಸ್ ಮುಖಂಡ ಎಸ್. ಶಿವಣ್ಣರಿಗೆ ಸದಸ್ಯ ಸ್ಥಾನ


