ಸುವರ್ಣ ವಿಧಾನಸೌಧ (ಬೆಳಗಾವಿ): 2006ರಿಂದ 2012ರ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಮಳೆ ನೀರು ಕಾಲುವೆಗಳ ಕಾಮಗಾರಿಗಳಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ಬಿಬಿಎಂಪಿಯ 38 ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಿ, ಕ್ರಮ ಜರುಗಿಸುವಂತೆ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಶಿಫಾರಸು ಮಾಡಿದೆ.
ಬೆಂಗಳೂರು ನಗರದಲ್ಲಿನ ಮಳೆ ನೀರು ಕಾಲುವೆಗಳ ನಿರ್ವಹಣೆ ಕುರಿತು ಮಹಾಲೇಖಪಾಲರ ವರದಿಯಲ್ಲಿ ವ್ಯಕ್ತವಾಗಿದ್ದ ಆಕ್ಷೇಪಣೆಗಳ ಕುರಿತು ಪರಿಶೀಲನೆ ನಡೆಸಿ ಸಿದ್ಧಪಡಿಸಿರುವ ವರದಿಯನ್ನು ಸಮಿತಿಯ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದರು. ಒಟ್ಟು 39 ಅಧಿಕಾರಿಗಳ ವಿರುದ್ಧ ಆರೋಪವಿದೆ. ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. 13 ಮಂದಿ ನಿವೃತ್ತರಾಗಿದ್ದು, 25 ಮಂದಿ ಸೇವೆಯಲ್ಲಿದ್ದಾರೆ. ನಿವೃತ್ತರೂ ಸೇರಿದಂತೆ 38 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯಡಿ ವಿನಾಯಿತಿ ನೀಡಿ, ಟೆಂಡರ್ ಇಲ್ಲದೇ ಕಾಮಗಾರಿ ಕೈಗೊಂಡಿರುವುದು, ತಾಂತ್ರಿಕವಾಗಿ ಅರ್ಹರಲ್ಲದ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿರುವುದು, ತುರ್ತು ಅಗತ್ಯದ ಹೆಸರಿನಲ್ಲಿ ಕಾರ್ಯಾದೇಶ ನೀಡಿದ್ದರೂ ನಿಗದಿತ ಗಡುವಿನ ಬಳಿಕವೇ ಕಾಮಗಾರಿ ಆರಂಭಿಸಿರುವುದು, ಪಾಲಿಕೆಗೆ ನಷ್ಟ ಉಂಟುಮಾಡಿರುವುದು ಸೇರಿದಂತೆ ಹಲವು ಆರೋಪಗಳು ಈ ಅಧಿಕಾರಿಗಳ ವಿರುದ್ಧ ಇವೆ.
ಮುಖ್ಯ ಎಂಜಿನಿಯರ್, ಸೂಪರಿಂಟೆಂಡಿಂಗ್ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್ಗಳು ಆರೋಪಿಗಳ ಪಟ್ಟಿಯಲ್ಲಿದ್ದಾರೆ. ಕರ್ತವ್ಯಲೋಪ ಮತ್ತು ಆರ್ಥಿಕ ನಷ್ಟ ಉಂಟುಮಾಡಿದ ಆರೋಪದ ಮೇಲೆ 38 ಮಂದಿ ವಿರುದ್ಧ ಆರೋಪಪಟ್ಟಿ ದಾಖಲಿಸಿ, ಇಲಾಖಾ ತನಿಖೆ ನಡೆಸಬೇಕು. ಇಲಾಖಾ ತನಿಖೆಯ ವರದಿಯ ಆಧಾರದಲ್ಲಿ ಶಿಸ್ತುಕ್ರಮ ಕೈಗೊಂಡು, ಸಮಿತಿಗೆ ವರದಿ ಸಲ್ಲಿಸಬೇಕು ಎಂದು ವರದಿಯಲ್ಲಿ ನಿರ್ದೇಶನ ನೀಡಲಾಗಿದೆ.
ರಾಜರಾಜೇಶ್ವರಿನಗರ ವಲಯದಲ್ಲಿ 2018ರಲ್ಲಿ ಒಂದೇ ದಿನ ಒಬ್ಬನೇ ಗುತ್ತಿಗೆದಾರನಿಗೆ ₹10.88 ಕೋಟಿ ಮೊತ್ತದ ರಾಜಕಾಲುವೆಗಳ ದುರಸ್ತಿ/ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆಯನ್ನು ನೀಡಿದ್ದ ಕಾರ್ಯನಿರ್ವಾಹಕ ಎಂಜಿನಿಯರ್ ವಿರುದ್ಧವೂ ಕ್ರಮ ಜರುಗಿಸುವಂತೆ ಸಮಿತಿ ಶಿಫಾರಸು ಮಾಡಿದೆ.
ಆತಂಕಕಾರಿ ಮಾಹಿತಿ: ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಲ್ಲಿ ತೀವ್ರ ಔಷಧ ಕೊರತೆ!


