BBMP
Loading ...

Money

ಕೋಲ್ಕತ: ಪಶ್ಚಿಮ ಬಂಗಾಳದ ಬೀರಭೂಮ್‌ನಲ್ಲಿ ತೃಣಮೂಲ ಕಾಂಗ್ರೆಸ್ ನಾಯಕನ ಆಪ್ತನ ಸಂಬಂಧಿ ಮೀನರ್ ಮಂಡಲ್ ಎಂಬುವರ ಮನೆ ಮೇಲೆ ಪೊಲೀಸ್​ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಬರೋಬ್ಬರಿ 28 ಕೋಟಿ ರೂ. ಗೂ ಅಧಿಕ ಅಕ್ರಮ ನಗದು ಪತ್ತೆಯಾಗಿದೆ. ಎಷ್ಟೊಂದು ನೋಟುಗಳ ಕಂತೆ ಇತ್ತೆಂದರೆ, ಅದನ್ನು ಎಣಿಕೆ ಮಾಡಲು ತಂದಿದ್ದ ಐದು ಯಂತ್ರಗಳೇ ಕೈಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಮೀನರ್ ಮಂಡಲ್ ಮಾಜಿ ಸರ್ಕಾರಿ ಬಸ್ ಚಾಲಕ. ಈ ತಿಂಗಳ ಆರಂಭದಲ್ಲಿ ಬಂಡಾಯ ಶಿಬಿರ ಸೇರಿದ್ದ ಮಾಜಿ ತೃಣಮೂಲ ಕಾಂಗ್ರೆಸ್ ನಾಯಕ ಅನುಬ್ರತಾ ಮಂಡಲ್ ಅವರ ಆಪ್ತ ಹಾಗೂ ಕಲ್ಲು ವ್ಯಾಪಾರಿ ತುಳು ಮಂಡಲ್ ಅವರ ಸಂಬಂಧಿ ಈತ. ಸದ್ಯ ಅಕ್ರಮ ಹಣ ಪತ್ತೆಯಾದ ಪ್ರಕರಣದಲ್ಲಿ ಮೀನರ್ ಮಂಡಲ್​ನನ್ನು ಪೊಲೀಸರು ಬಂಧಿಸಿದ್ದಾರೆ.

ನಗದಷ್ಟೇ ಅಲ್ಲದೆ ಈ ದಾಳಿಯಲ್ಲಿ ಬರೋಬ್ಬರಿ 15 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮಾರುಕಟ್ಟೆ ಮೌಲ್ಯ ಸುಮಾರು 21 ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ ಎಂದು ಅಂದಾಜಿಸಲಾಗಿದೆ. ಬುಧವಾರ ರಾತ್ರಿ ಆರಂಭವಾದ ಈ ಶೋಧ ಕಾರ್ಯಾಚರಣೆಯಲ್ಲಿ ಆರಂಭಿಕ ಹಂತದಲ್ಲಿ ಐದುವರೆ ಕೋಟಿ ರೂಪಾಯಿಗೂ ಅಧಿಕ ನಗದು ಪತ್ತೆಯಾಗಿದ್ದು, ಬೆಳಗಾಗುವಷ್ಟರಲ್ಲಿ ಒಟ್ಟು ನಗದು ರಾಶಿಯು 28 ಕೋಟಿ ರೂಪಾಯಿ ದಾಟಿದೆ. ಅಲ್ಲದೆ, ವಶಪಡಿಸಿಕೊಂಡ ಹಣ ಮತ್ತು ಚಿನ್ನವೆಲ್ಲವೂ ತುಳು ಮಂಡಲ್ ಹಾಗೂ ಆತನ ಅಕ್ರಮ ಸಿಂಡಿಕೇಟ್‌ಗೆ ಸೇರಿದ್ದೆಂದು ಮೀನರ್ ಮಂಡಲ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಬೃಹತ್ ಪ್ರಮಾಣದ ಅಕ್ರಮ ನಗದು ಹಾಗೂ ಚಿನ್ನಾಭರಣ ಎಲ್ಲಿಂದ ಮತ್ತು ಹೇಗೆ ಸಂಗ್ರಹವಾಯಿತು ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ಕಾರ್ಯಾಚರಣೆಯುದ್ದಕ್ಕೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಈವರೆಗೆ ದಾಳಿಯ ನಿಖರ ಕಾರಣ ಅಥವಾ ಅಕ್ರಮ ಹಣಕಾಸು ವ್ಯವಹಾರಗಳ ನಂಟಿನ ಬಗ್ಗೆ ಪೊಲೀಸರು ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲವಾದರೂ, ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ.

ಮರಳು ಮಾಫಿಯಾ ವಿರುದ್ಧದ ಈ ಕಾರ್ಯಾಚರಣೆ ಶ್ಲಾಘನೀಯ ಎಂದು ಬಣ್ಣಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂಧು ಅಧಿಕಾರಿ, ಮೀನರ್ ಮಂಡಲ್ ಮನೆ ಮೇಲೆ ನಡೆದ ಈ ದಿಢೀರ್ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ನಗದು ಮತ್ತು ಹದಿನೈದು ಕೆಜಿ ಚಿನ್ನ ವಶಪಡಿಸಿಕೊಂಡಿರುವುದು ಭ್ರಷ್ಟ ವ್ಯವಹಾರದ ಆಳವನ್ನು ಬಹಿರಂಗಪಡಿಸಿದೆ ಎಂದು ತಿಳಿಸಿದ್ದಾರೆ.

ಈ ಲಿಂಕ್​​ ಕ್ಲಿಕ್​ ಮಾಡಿ ನಮ್ಮ ವಾಟ್ಸ್​ಆ್ಯಪ್​ ಗ್ರೂಪ್​ಗೆ ಜಾಯಿನ್​ ಆಗಿ: ಬಿಬಿಎಂಪಿ ನ್ಯೂಸ್​9

ಮರಳು ಮಾಫಿಯಾ ಮೇಲಿನ ಈ ಕಠಿಣ ಕ್ರಮಕ್ಕಾಗಿ ನಮ್ಮ ಕಾನೂನು ಜಾರಿ ಸಿಬ್ಬಂದಿಯ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ. ಖಚಿತ ಮಾಹಿತಿಯ ಆಧಾರದ ಮೇಲೆ ನಿಖರವಾದ ಕಾರ್ಯಾಚರಣೆ ನಡೆಸಿರುವ ಬೀರಭೂಮ್ ಪೊಲೀಸರು, ಮೊಹಮ್ಮದ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ಮಾಫಿಯಾ ದಂಧೆಕೋರ ತುಳು ಮಂಡಲ್ ಅಲಿಯಾಸ್ ಮೊಹಮ್ಮದ್ ನಜಿಬುದ್ದೀನ್‌ನ ಅಡಗುತಾಣದ ಮೇಲೆ ಪ್ರಮುಖ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯು ಅಪಾರ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿದೆ. ಇಲ್ಲಿಯವರೆಗೆ ವಶಪಡಿಸಿಕೊಂಡ ನಗದು 5.5 ಕೋಟಿ ರೂಪಾಯಿಗಳಾಗಿದ್ದು, ಹಣದ ಎಣಿಕೆ ಕಾರ್ಯ ಮುಂದುವರಿದಿದೆ ಹಾಗೂ 15 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು, ಭ್ರಷ್ಟರ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ನಡೆಸುತ್ತಿರುವ ಅಭಿಯಾನವು ‘ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿ’ಯ ಮಾರ್ಗದರ್ಶೀ ತತ್ವದೊಂದಿಗೆ ಮುಂದುವರಿಯುತ್ತದೆ. ಸಾರ್ವಜನಿಕ ಸಂಪನ್ಮೂಲಗಳನ್ನು ಶೋಷಿಸಿ ಮತ್ತು ಅಂದಿನ ಆಡಳಿತಾರೂಢ ರಾಜಕೀಯ ಪಕ್ಷದೊಂದಿಗೆ ಕೈಜೋಡಿಸಿ ಸಂಪತ್ತು ಸಂಗ್ರಹಿಸಿದ ಕಳಂಕಿತ ಹಿನ್ನೆಲೆಯುಳ್ಳ ಯಾವುದೇ ವ್ಯಕ್ತಿಯನ್ನು ಬಿಡುವುದಿಲ್ಲ. ಸಾರ್ವಜನಿಕ ಸಂಪತ್ತು ಜನರಿಗೆ ಸೇರಿದೆ ಮತ್ತು ಅದನ್ನು ಲೂಟಿ ಮಾಡುವವರು ಕಾನೂನಿನ ಸಂಪೂರ್ಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಕಣ್ಗಾವಲು ಮತ್ತು ರಾಜಿರಹಿತ ಕ್ರಮ ಮುಂದುವರಿಯಲಿದೆ. ಮಾಫಿಯಾ ಸಿಂಡಿಕೇಟ್‌ಗಳ ಮೇಲಿನ ದಾಳಿ ಮುಂದುವರಿಯುತ್ತದೆ ಎಂದು ಸುವೇಂಧು ಅಧಿಕಾರಿ ಹೇಳಿದ್ದಾರೆ.

ಮೂಲಗಳ ಪ್ರಕಾರ ಮೀನರ್ ಅವರು ರಾಜ್ಯ ಸಾರಿಗೆ ಇಲಾಖೆಯ ಮಾಜಿ ಉದ್ಯೋಗಿಯಾಗಿದ್ದು, ಕಲ್ಲು ವ್ಯವಹಾರಕ್ಕೆ ಪ್ರವೇಶಿಸುವ ಮೊದಲು ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅಷ್ಟು ದೊಡ್ಡ ಮೊತ್ತದ ಹಣವನ್ನು ಅವರು ಹೇಗೆ ಸಂಗ್ರಹಿಸಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಅವರ ಆದಾಯದ ಮೂಲಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಅನುಬ್ರತಾ ಮಂಡಲ್ ಅವರ ಜೊತೆ ಆರೋಪಿಯ ನಂಟು ಕುರಿತಂತೆ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಎರಡೂ ಬಣಗಳು ಪರಸ್ಪರ ಗಂಭೀರ ಆರೋಪಗಳನ್ನು ಮಾಡುವುದರೊಂದಿಗೆ ರಾಜಕೀಯ ಕೆಸರೆರೆಚಾಟ ಮುಂದುವರಿದಿದೆ.

ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮಾತನಾಡಿ, ಬೀರಭೂಮ್ ಯಾವಾಗಲೂ ಮಾಜಿ ಟಿಎಂಸಿ ಸಚಿವರೊಬ್ಬರ ಮತ್ತು ಬೀರಭೂಮ್‌ನ ಹುಲಿಯ ವಿಶೇಷ ಭದ್ರಕೋಟೆಯಾಗಿ ಪರಿಗಣಿಸಲ್ಪಟ್ಟಿದೆ, ಅಲ್ಲಿ ಬೇರೆ ಯಾರೂ ನೆಲೆಯೂರಲು ಸಾಧ್ಯವಿರಲಿಲ್ಲ. ಮುಖ್ಯಮಂತ್ರಿಯವರು ಈಗ ತನಿಖೆ ನಡೆಸಿ ಆರೋಪಿಗಳು ಮತ್ತು ಈ ಪ್ರಭಾವಿ ವ್ಯಕ್ತಿಗಳ ನಡುವಿನ ನಂಟಿನ ವ್ಯಾಪ್ತಿಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಿತಬ್ರತ ಬಣದೊಂದಿಗೆ ಗುರುತಿಸಿಕೊಂಡಿರುವ ಟಿಎಂಸಿ ಶಾಸಕ ಪ್ರಸೂನ್ ಬ್ಯಾನರ್ಜಿ ಮತ್ತೊಂದು ಬಣದತ್ತ ಬೆರಳು ಮಾಡಿ ತೋರಿಸಿದ್ದು, ಮಾಹಿತಿಯ ಆಧಾರದ ಮೇಲೆ ಇಷ್ಟು ದೊಡ್ಡ ಪ್ರಮಾಣದ ನಗದು ವಶಪಡಿಸಿಕೊಂಡಿರುವುದಕ್ಕೆ ಪೊಲೀಸರಿಗೆ ಕ್ರೆಡಿಟ್ ನೀಡಬೇಕು. ಇದು ಯಾರಿಗೂ ಸೇರಿದ್ದ ಹಣ ಮತ್ತು ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದರು ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.

2024ರಲ್ಲಿ ಬೀರಭೂಮ್‌ನ ಸೂರಿ ಎಂಬಲ್ಲಿ ತುಳು ಮಂಡಲ್ ತಮ್ಮ ಮಗಳ ಮದುವೆಯನ್ನು ಅತ್ಯಂತ ಅದ್ದೂರಿಯಾಗಿ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಬಂಗಾಳಿ ಹಾಗೂ ಬಾಲಿವುಡ್ ನಟರನ್ನು ಆಹ್ವಾನಿಸಲಾಗಿತ್ತು. ಈಗ ನಡೆದಿರುವ ಈ ಹಣ ಹಾಗೂ ಚಿನ್ನದ ವಶಪಡಿಸಿಕೊಳ್ಳುವಿಕೆ ಆ ಮದುವೆಯ ವಿಚಾರವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಮೂಲಗಳ ಪ್ರಕಾರ, ಈ ವಿವಾಹ ಮಹೋತ್ಸವದ ಒಟ್ಟು ವೆಚ್ಚ ಬರೋಬ್ಬರಿ 100 ಕೋಟಿ ರೂಪಾಯಿಗಳಷ್ಟಿತ್ತು ಎನ್ನಲಾಗಿದ್ದು, ಆಹ್ವಾನಿತರ ಅತಿಥಿ ಪಟ್ಟಿಯಲ್ಲಿ ಅಂಕುಶ್ ಹಜ್ರಾ, ದರ್ಶನಾ ಬನಿಕ್, ಅರ್ಬಾಜ್ ಖಾನ್ ಮತ್ತು ಝರೀನ್ ಖಾನ್ ಸೇರಿದಂತೆ ಹಲವು ಪ್ರಸಿದ್ಧ ನಟರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *