Greater Bengaluru News9 : ಬಸ್ ಪ್ರಯಾಣಿಕರು ಚಿಲ್ಲರೆ ಹಣ (ಚೇಂಜ್) ಹೊಂದಿಲ್ಲ ಎಂಬ ಕಾರಣಕ್ಕೆ ಅವರನ್ನು ಕಿರುಕುಳ ನೀಡುವುದು ಅಥವಾ ಮಧ್ಯದಲ್ಲೇ ಬಸ್ನಿಂದ ಇಳಿಸುವುದು ಸಹಿಸಲಾಗದ ವರ್ತನೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಹೇಳಿದ್ದು, ದುರ್ವರ್ತನೆ ತೋರುವ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಬುಧವಾರ ಪ್ರಕಟಣೆ ಹೊರಡಿಸಿದ ಸಚಿವರುಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ಗೌರವಯುತವಾಗಿ ವರ್ತಿಸಬೇಕು, ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಚಿಲ್ಲರೆ ಹಣ ಇಲ್ಲ ಎಂಬ ನೆಪದಲ್ಲಿ ಪ್ರಯಾಣಿಕರನ್ನು ಬಸ್ನಿಂದ ಇಳಿಸುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಇದೇ ರೀತಿಯ ಅನುಭವ ತಮಗೂ ಈ ತಿಂಗಳ ಆರಂಭದಲ್ಲಿ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುವಾಗ ಆಗಿತ್ತು.
ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿ ಬಸ್ನಿಂದ ಇಳಿಸುವುದು ಅಮಾನವೀಯ ಕೃತ್ಯವಾಗಿದ್ದು, ಇದು ಪ್ರಯಾಣಿಕರಿಗೆ ಕಿರುಕುಳ ನೀಡಿದಂತೆಯೇ. ಇಂತಹ ಪದ್ಧತಿ ಕೂಡಲೇ ನಿಲ್ಲಬೇಕು. ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದರೆ ಸಂಬಂಧಿಸಿದ ನಿರ್ವಾಹಕರು ಹಾಗೂ ಚಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ಜುಲೈ 11ರಂದು ಸಚಿವ ಬೈರತಿ ಸುರೇಶ್ ಅವರನ್ನು ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಬಸ್ನಿಂದ ಇಳಿಯುವಂತೆ ಹೇಳಿದ್ದ ಬಿಎಂಟಿಸಿ ನಿರ್ವಾಹಕ ಟಿ.ಜಿ. ರಾಮಕೃಷ್ಣ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬುಧವಾರ ಸಚಿವರನ್ನು ಭೇಟಿಯಾದ ಟಿ.ಜಿ. ರಾಮಕೃಷ್ಣ ಅವರು ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದರು.
ಬಳಿಕ ಸಚಿವರು ಅವರ ಅಮಾನತನ್ನು ಹಿಂಪಡೆದು ಕರ್ತವ್ಯಕ್ಕೆ ಮರುನೇಮಕ ಮಾಡುವಂತೆ ಸೂಚಿಸಿದರೂ, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಿದರು.


