Greater Bengaluru News9 : ಕಾಮಗಾರಿ ಕೆಲಸದ 2ನೇ ಕಂತಿನ ಬಿಲ್ ಹಣ ಪಾವತಿಸಲು ಗುತ್ತಿಗೆದಾರರಿಂದ ಲಂಚ ಪಡೆದ ಅಧಿಕಾರಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ಎಲ್.ಲಕ್ಷ್ಮೀನಾರಾಯಣ ಅವರು, 4 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಜಿಲ್ಲೆಯ ಜೇವರ್ಗಿ ಪುರಸಭೆಯ ಕಿರಿಯ ಅಭಿಯಂತರರಾದ ಗೋಪಾಲ ಬಿಜಾಸ್ಪೂರ ಇವರು, ಕಳೆದ 26/11/2019 ರಲ್ಲಿ ಫಿಯಾದಿದಾರ ಪರಶುರಾಮ ಶಂಕರ ದೊಡ್ಡಮನಿ ಅವರಿಂದ 26 ಸಾವಿರ ರೂ.ಗಳ ಲಂಚ ಪಡೆಯುತ್ತಿರುವಾಗ ದಾಳಿ ಮಾಡಿದ ಲೋಕಾಯುಕ್ತ ಪೊಲೀಸ ಅಧಿಕಾರಿಗಳ ತಂಡ ರೆಡ್ಡ ಹ್ಯಾಂಡ್ ಆಗಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು, ಈ ಸಂಬಂಧ ಡಿವೈಎಸ್ಪಿ ಸುಧಾ ಆದಿ ಪ್ರಕರಣ ದಾಖಲಿಸಿದ್ದರು, ಲೋಕಾಯುಕ್ತ ಪಿಐ ರಾಘವೇಂದ್ರ ಅವರು, ತನಿಖೆ ಕೈಗೊಂಡು ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಜೇವರ್ಗಿ ಪುರಸಭೆ ವ್ಯಾಪ್ತಿಯಲ್ಲಿನ ಡಾ.ಅಂಬೇಡ್ಕರ ಮೂರ್ತಿಯನ್ನು ಸ್ಥಳಾಂತರ ಮಾಡುವ ಮತ್ತು ನಾಲೆಯ ಮೇಲೆ ಸ್ಲ್ಯಾಬ್ ಹಾಕುವ ವೇದಿಕೆಯ ಕಟ್ಟೆಕಟ್ಟುವ ಕೆಲಸದ ಗುತ್ತಿಗೆಯನ್ನು 3500000 ರೂ.ಗಳಿಗೆ ಪರಶುರಾಮ ದೊಡ್ಡಮನಿ ಅವರಿಗೆ ನೀಡಲಾಗಿತ್ತು, ಕಾಮಗಾರಿಯ 2ನೇ ಕಂತಿನ 670000 ರೂ.ಗಳ ಬಿಲ್ ಪಾಸ್ ಮಾಡಲು ಶೇ.4 ರಷ್ಟು 26000 ರೂ.ಗಳ ಲಂಚ ಪಡೆಯುವಾಗಿ ಲೋಕಾಯುಕ್ತರ ದಾಳಿಗೆ ಒಳಗಾದ ಆರೋಪಿಯ ವಿರುದ್ದ ದಾಖಲಾದ ಪ್ರಕರಣದ ವಿಚಾರಣೆ ಕೈಗೊಂಡ ನ್ಯಾಯಾಧೀಶರು, ಸರಕಾರಿ ವಿಶೇಷ ಅಭಿಯೋಜಕರಾದ ಅಶೋಕ ಎಸ್.ಚಾಂದರವಠೆ ಅವರ ವಾದ ಮತ್ತು ಪ್ರತಿವಾದವನ್ನು ಆಲಿಸಿ, ಈ ಮೇಲಿನಂತೆ ತೀರ್ಪು ನೀಡಿ ಆದೇಶಿಸಿದ್ದಾರೆ.


