BBMP
Loading ...

KJ George

ಬೆಂಗಳೂರು: ವಿದ್ಯುತ್ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವ ಇಂಧನ ಇಲಾಖೆ, ಕಳೆದ ಬೇಸಿಗೆ (ಏಪ್ರಿಲ್ 1) ನಂತರ ರಾಜ್ಯದಲ್ಲಿ 1,403 ಕೋಟಿ ರೂ. ಮೌಲ್ಯದ ವಿದ್ಯುತ್ ಮಾರಾಟ ಮಾಡಿದೆ.

 

ಬೆಸ್ಕಾಂ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, “2024ರ ಏಪ್ರಿಲ್ 1ರಿಂದ ಜುಲೈ ಅಂತ್ಯದವರೆಗೆ 1,403 ಕೋಟಿ ರೂ. ಮೊತ್ತದ ವಿದ್ಯುತ್ ಮಾರಾಟ ಮಾಡಲಾಗಿದೆ. ಮೇ 18ರವರೆಗೆ ವಿದ್ಯುತ್ ಖರೀದಿ ಹೆಚ್ಚಾಗಿದ್ದರೆ, ನಂತರದಲ್ಲಿ ಮಾರಾಟ ಹೆಚ್ಚಾಗಿದೆ. ಪ್ರತಿನಿತ್ಯ 30ರಿಂದ 40 ಕೋಟಿ ರೂ. ಮೊತ್ತದ ವಿದ್ಯುತ್ ಮಾರಾಟ ಮಾಡಲಾಗುತ್ತಿದೆ,” ಎಂದು ಮಾಹಿತಿ ನೀಡಿದರು.

 

“ಪ್ರಸ್ತುತ ರಾಜ್ಯದಲ್ಲಿ ನಿತ್ಯ ಸರಾಸರಿ 250 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ಪೈಕಿ 20 ಮಿಲಿಯನ್ ಯೂನಿಟ್ಅನ್ನು ಬೇಸಿಗೆಯಲ್ಲಿ ವಿನಿಮಯ ಆಧಾರದ ಮೇಲೆ ವಿದ್ಯುತ್ ಪಡೆದುಕೊಂಡಿರುವ ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಪೂರೈಸಲಾಗುತ್ತಿದೆ. 40ರಿಂದ 50 ಮಿಲಿಯನ್ ಯೂನಿಟ್ ಮಾರಾಟ ಮಾಡಲಾಗುತ್ತಿದೆ. 180 ಮಿಲಿಯಿನ್ ಯೂನಿಟ್ ವಿದ್ಯುತ್ ರಾಜ್ಯದಲ್ಲಿ ಬಳಕೆಯಾಗುತ್ತಿದೆ,” ಎಂದು ಹೇಳಿದರು.

 

ವಿದ್ಯುತ್ ಉತ್ಪಾದನೆ, ಆದಾಯದಲ್ಲಿ ದಾಖಲೆ

“ಪ್ರಸ್ತುತ ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲಿ 1,006, ಬಳ್ಳಾರಿ ಉಷ್ಣ ವಿದ್ಯುತ ಸ್ಥಾವರದಲ್ಲಿ 1,049, ಯರಮರಸ್ ಉಷ್ಣ ವಿದ್ಯುತ ಸ್ಥಾವರದಲ್ಲಿ 898 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮಳೆ ಹೆಚ್ಚಾಗಿದ್ದರಿಂದ ಜಲ ವಿದ್ಯುತ್ ಉತ್ಪಾದನಾ ಪ್ರಮಾಣ 34.96 ಮಿಲಿಯನ್ ಯೂನಿಟ್ ವರೆಗೆ ಹೆಚ್ಚಾಗಿದೆ. ಸೌರ ಶಕ್ತಿಯಿಂದ 34.64 ಹಾಗೂ ಪವನದಿಂದ 60.05 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ,” ಎಂದು ವಿವರಿಸಿದರು.

 

“ಕಳೆದ ಸಾಲಿನಲ್ಲಿ ಕೆಪಿಸಿಎಲ್ ನಿಂದ ನಿರ್ವಹಣೆ ಮಾಡುತ್ತಿರುವ ರಾಜ್ಯದ ಮೂರು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ದಾಖಲೆಯ ವಿದ್ಯುತ್ ಉತ್ಪಾದನೆ ಜತೆಗೆ ದಾಖಲೆಯ ಆದಾಯವನ್ನೂ ಗಳಿಸಲಾಗಿದೆ. 2022-23ನೇ ಸಾಲಿನಲ್ಲಿ 18,419 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿ 9,326 ಕೋಟಿ ರು. ಆದಾಯ ಬಂದಿದ್ದರೆ, 2023-24ನೇ ಸಾಲಿನಲ್ಲಿ 22,313 ಮಿಲಿಯನ್ ಯೂನಿಟ್ ಉತ್ಪಾದನೆ ಮಾಡಿ 10,916 ಕೋಟಿ ರು. ಆದಾಯ ಗಳಿಸಲಾಗಿದೆ. ಇದು ಈವರೆಗಿನ ದಾಖಲೆ ಎಂದು ಹೇಳಿದ ಸಚಿವರು, ಆರ್ ಟಿಪಿಎಸ್ ನ ಉತ್ಪಾದನಾ ಘಟಕಗಳು ಬೇಸಿಗೆಯಲ್ಲಿ ಸತತ 103 ದಿನ ವಿದ್ಯುತ್ ಉತ್ಪಾದಿಸಿ ದಾಖಲೆ ನಿರ್ಮಿಸಿವೆ”ಎಂದು ಸಚಿವರು ವಿವರಿಸಿದರು.

 

ಯಲಹಂಕ, ಬಿಡಿದಿ ಘಟಕ ಮುಂದಿನ ತಿಂಗಳು ಉದ್ಘಾಟನೆ
“ಯಲಹಂಕ ಸಮೀಪ ಸ್ಥಾಪನೆಯಾಗಿರುವ ರಾಜ್ಯದಲ್ಲಿಯೇ ಪ್ರಪ್ರಥಮ ಅನಿಲ ಆಧಾರಿತ 370 ಮೆಗಾ ವಾಟ್‌ ಸಾಮರ್ಥ್ಯದ ‘ಯಲಹಂಕ ಸಂಯೋಜಿತ ಆವರ್ತ ವಿದ್ಯುತ್ ಸ್ಥಾವರ’ (ಸಿಸಿಪಿಪಿ) ಹಾಗೂ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಸಿಎಲ್‌) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ 260 ಕೋಟಿ ರೂ. ವೆಚ್ಚದಲ್ಲಿ ಬಿಡದಿಯಲ್ಲಿ ಸ್ಥಾಪಿಸಲಾಗುತ್ತಿರುವ ತ್ಯಾಜ್ಯದಿಂದ ತ್ಯಾಜ್ಯದಿಂದ 11.5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಘಟಕವು ಮುಂದಿನ ತಿಂಗಳು ಉದ್ಘಾಟನೆಗೊಳ್ಳಲ್ಲಿದೆ,” ಎಂದು ಸಚಿವರು ತಿಳಿಸಿದರು.

 

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಎಸ್ಕಾಂಗಳಿಗೆ ಒಟ್ಟಾರೆ 96.66 ಕೋಟಿ ರು. ನಷ್ಟವಾಗಿದ್ದು, ಹಾನಿಗೊಳಗಾಗಿರುವ ಸಾವಿರಾರು ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್ ಗಳು ಹಾಗೂ ಲೈನ್‌ಗಳನ್ನು ದುರಸ್ತಿಗೊಳಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

 

ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಠಿಯಿಂದಾಗಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಪರಿಸ್ಥಿತಿಗಳ ಕುರಿತು ಎಲ್ಲಾ ಎಸ್ಕಾಂ ಹಿರಿಯ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ ಬಳಿಕ ಅವರು ಮಾತನಾಡಿದರು.

 

“ಮಳೆ ಮತ್ತು ಗಾಳಿಯಿಂದ 53,816 ಕಂಬಗಳು, 3,924 ಟ್ರಾನ್ಸ್ ಫಾರ್ಮರ್ ಗಳು, 1,120 ಕಿ.ಮೀ. ವಿದ್ಯುತ್ ತಂತಿಗಳು ಹಾನಿಗದೊಳಗಾಗಿದ್ದು. ಈ ಪೈಕಿ 51,119 ಕಂಬಗಳು, 3,918 ಟ್ರಾನ್ಸ್ ಫಾರ್ಮರ್ ಗಳು, 1,063 ಕಿ.ಮೀ. ವಿದ್ಯುತ್ ತಂತಿಗಳನ್ನು ದುರಸ್ತಿಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ಬಾಕಿ ಉಳಿದ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಎಸ್ಕಾಂ ಸಿಬ್ಬಂದಿ ಸತತವಾಗಿ ಶ್ರಮಿಸುತ್ತಿದ್ದಾರೆ,” ಎಂದರು.

 

“ವಿದ್ಯುತ್ ಕಂಬ, ತಂತಿ, ಟ್ರಾನ್ಸ್ ಫಾರ್ಮರ್‌ಗಳ ದುರಸ್ತಿಗೆ ಮೆಸ್ಕಾಂ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಭಾರಿ ಮಳೆ ಬೀಳುತ್ತಿರುವ ಮಲೆನಾಡು, ಕರಾವಳಿ ಮತ್ತು ಬೆಳಗಾವಿ ಭಾಗಗಳಲ್ಲಿ ನೀರಿನ ಮಧ್ಯೆಯೂ ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಹೆಚ್ಚುವರಿ ಗ್ಯಾಂಗ್ ಮೆನ್ ಮತ್ತು ಲೈನ್ ಮೆನ್ ಗಳನ್ನು ನೇಮಿಸುವುದರ ಜತೆಗೆ ಗುತ್ತಿಗೆದಾರರ ನೆರವಿನೊಂದಿಗೆ ತಂಡಗಳನ್ನು ಮಾಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ವಿದ್ಯುತ್ ಮರು ಸಂಪರ್ಕಕ್ಕೆ ಕಂಬಗಳು, ಕಂಡಕ್ಟರ್ ಗಳು, ತಂತಿಗಳ ಕೊರತೆಯಾಗದಂತೆ ಮೊದಲೇ ಸಂಗ್ರಹಿಸಿಟ್ಟುಕೊಳ್ಳಲಾಗಿತ್ತು. ಇದರಿಂದ ಮಳೆಯಿಂದ ಆಗಿರುವ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲಾಗುತ್ತಿದೆ,” ಎಂದು ತಿಳಿಸಿದರು.

 

ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಅನುಕೂಲವಾಗುವಂತೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಹಾರ ಕಾರ್ಯ ಕೈಗೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮಳೆ ಮತ್ತು ಗಾಳಿಯಿಂದ ಸದ್ಯಕ್ಕೆ ಸಾಕಷ್ಟು ಸಮಸ್ಯೆಯಾಗಿದ್ದರೂ ಜಲಾಶಯಗಳು ತುಂಬುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಜಲ ವಿದ್ಯುತ್ ಉತ್ಪಾದನೆಗೆ ಅನುಕೂಲವಾಗುತ್ತದೆ”, ಎಂದು ಹೇಳಿದರು.

 

ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶತಕ ಕೆ.ಪಿ.ರುದ್ರಪ್ಪಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *