BBMP
Loading ...

WhatsApp Image 2026-06-03 at 12.03.48 PM

ಬೆಂಗಳೂರು: ರಾಜ್ಯ ರಾಜಕಾರಣದ ತೀವ್ರ ಕುತೂಹಲಕ್ಕೆ ತೆರೆ ಬಿದ್ದಿದ್ದು, ನೂತನ ಸರ್ಕಾರದ ಸಚಿವ ಸಂಪುಟದ ಫೈನಲ್ ಪಟ್ಟಿ ಅಧಿಕೃತವಾಗಿ ಸಿದ್ಧಗೊಂಡಿದೆ. ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ( D K Shivakumar ) ಅವರು ರಾಜ್ಯದ ಚುಕ್ಕಾಣಿ ಹಿಡಿಯುತ್ತಿದ್ದರೆ, ಅವರಿಗೆ ಪ್ರಬಲ ಸಾಥ್ ನೀಡಲು ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ (ಡಿಸಿಎಂ) ಅಧಿಕಾರ ಸ್ವೀಕರಿಸುತ್ತಿದ್ದಾರೆ. ಈ ಇಬ್ಬರು ಉನ್ನತ ನಾಯಕರ ನಾಯಕತ್ವದಲ್ಲಿ ರಾಜ್ಯದಲ್ಲಿ ಹೊಸ ಆಡಳಿತದ ಪರ್ವ ಆರಂಭವಾಗುತ್ತಿದ್ದು, ಸಂಪುಟ ಸೇರಲಿರುವ ಸಚಿವರ ಪಟ್ಟಿ ಅಂತಿಮ ರೂಪ ಪಡೆದುಕೊಂಡಿದೆ.

ಈ ಬಾರಿಯ ಸಚಿವ ಸಂಪುಟ ರಚನೆಯಲ್ಲಿ ಎಲ್ಲಾ ಸಮುದಾಯಗಳಿಗೂ ಸಮಾನ ಆದ್ಯತೆ ನೀಡಲಾಗಿದ್ದು, ಜಾತಿವಾರು ಸಮೀಕರಣಕ್ಕೆ ಹೈಕಮಾಂಡ್ ಹೆಚ್ಚಿನ ಒತ್ತು ನೀಡಿದೆ. ಅದರಂತೆ ಒಕ್ಕಲಿಗ ಸಮುದಾಯಕ್ಕೆ (ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ) 3 ಸ್ಥಾನ, ಲಿಂಗಾಯತ ಸಮುದಾಯಕ್ಕೆ 3 ಸ್ಥಾನ, ದಲಿತ ಸಮುದಾಯಕ್ಕೆ 3 ಸ್ಥಾನ (ಡಿಸಿಎಂ ಜಿ. ಪರಮೇಶ್ವರ್ ಸೇರಿದಂತೆ) ಹಾಗೂ ಕುರುಬ ಸಮುದಾಯಕ್ಕೆ 2 ಸಚಿವ ಸ್ಥಾನಗಳನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರನ್ನು ಸಮರ್ಥವಾಗಿ ಪ್ರತಿನಿಧಿಸಲು ಎಸ್‌ಟಿ ಸಮುದಾಯಕ್ಕೆ 1, ಮುಸ್ಲಿಂ ಸಮುದಾಯಕ್ಕೆ 1 ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ 1 ಸ್ಥಾನವನ್ನು ಹಂಚಿಕೆ ಮಾಡಿ ಮೊದಲ ಹಂತದಲ್ಲಿ ಸಂಪುಟ ರಚಿಸಲಾಗಿದೆ.

ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪ್ರಮುಖ ನಾಯಕರ ಪಟ್ಟಿಯಲ್ಲಿ ಅನುಭವಿಗಳು ಮತ್ತು ಯುವ ನಾಯಕರ ದಂಡೇ ಇದೆ. ಹಿರಿಯ ನಾಯಕರಾದ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ ಹಾಗೂ ಯು.ಟಿ. ಖಾದರ್ ಅವರಿಗೆ ಸಚಿವ ಸ್ಥಾನ ಖಚಿತವಾಗಿದೆ. ಇವರೊಂದಿಗೆ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಯತೀಂದ್ರ ಸಿದ್ದರಾಮಯ್ಯ, ಶರಣಪ್ರಕಾಶ್ ಪಾಟೀಲ್, ಬೈರತಿ ಸುರೇಶ್ ಹಾಗೂ ಈಶ್ವರ್ ಖಂಡ್ರೆ ಅವರು ಕೂಡ ಸಚಿವರಾಗಿ ಫೈನಲ್ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇಂದು ಸಂಜೆ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರೊಂದಿಗೆ ಈ ಎಲ್ಲಾ 12 ಪ್ರಮುಖ ನಾಯಕರು ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರ ರಾಜಕಾರಣದ ದಿಗ್ಗಜರು, ವಿವಿಧ ರಾಜ್ಯಗಳ ಮುಖಂಡರು ಹಾಗೂ ನಾಡಿನ ಸಾಂಸ್ಕೃತಿಕ, ಸಾಮಾಜಿಕ ವಲಯದ ಗಣ್ಯರು ಈ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ.

ಪ್ರಮುಖವಾಗಿ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ವಾದ್ರಾ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕಾಂಗ್ರೆಸ್ ಸಿಎಂಗಳಾದ ವಿ.ಡಿ.ಸತೀಶನ್, ರೇವಂತ ರೆಡ್ಡಿ, ಸುಖವೀಂದರ್ ಸಿಂಗ್ ಸುಖು ಸೇರಿದಂತೆ ಎಐಸಿಸಿ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಮಹತ್ವದ ಘೋಷಣೆ ನಿರೀಕ್ಷೆ
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಡಿ.ಕೆ.ಶಿವಕುಮಾರ್ ತಮ್ಮ ನೇತೃತ್ವದಲ್ಲಿ ನಡೆಯುವ ಪ್ರಥಮ ಸಚಿವ ಸಂಪುಟ ಸಭೆಯಲ್ಲಿ ಮೂರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ. ಶಿಕ್ಷಣ, ನೀರಾವರಿ ಕ್ಷೇತ್ರ ಹಾಗೂ ಬೆಂಗಳೂರಿಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

Leave a Reply

Your email address will not be published. Required fields are marked *