ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೇಲೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿತ್ತು. ಅದರಂತೆ ಒಂದೊಂದೇ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿತ್ತು. ಈ ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆವರೆಗೆ ಉತ್ತಮವಾಗಿಯೇ ಜಾರಿಯಾಗಿದ್ದವು.
ಲಕ್ಷಾಂತರ ಜನ ಮಹಿಳೆಯರು ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ, ಗೃಹಜ್ಯೋತಿಯಡಿ ಉಚಿತ ವಿದ್ಯುತ್, ಅನ್ನಭಾಗ್ಯ ಹಾಗೂ ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಂಡಿದ್ದರು. ಗ್ಯಾರಂಟಿ ಯೋಜನೆಗಳ ಲಾಭ ಪಡೆದುಕೊಂಡರು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಕೈಕೊಟ್ಟಿದ್ದರು. ಇದೇ ಕಾರಣಕ್ಕೂ ಏನೋ ಲೋಕಸಭಾ ಚುನಾವಣೆ ಬಳಿಕ ಮನೆಯ ಯಜಮಾನಿಯರ ಖಾತೆಗೆ 2 ಸಾವಿರ ರೂ. ಗೃಹಲಕ್ಷ್ಮಿ ಹಣ ಬಂದಿಲ್ಲ. ಹೀಗಾಗಿ ಪ್ರತಿದಿನವೂ ಹಣ ಬರದ ಮಹಿಳೆಯರು ಬ್ಯಾಂಕಿಗೆ ಎಡತಾಕುವಂತಾಗಿದೆ. ಇಂದು ಬರುತ್ತೆ, ನಾಳೆ ಬರುತ್ತೆ ಅಂತಾ ಲಕ್ಷಾಂತರ ಮಹಿಳೆಯರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಮೇ ತಿಂಗಳ ಹಣ ಪಡೆದಿರುವ ಮಹಿಳೆಯರಿಗೆ ಜೂನ್, ಜುಲೈ ತಿಂಗಳ ಹಣ ಬಂದಿಲ್ಲ. ಬ್ಯಾಂಕಿಗೆ ಹೋಗಿ ಪಾಸ್ಬುಕ್ನಲ್ಲಿ ಎಂಟ್ರಿ ಮಾಡಿಸಿಕೊಂಡು ಬಂದಿರೂ ಪ್ರಯೋಜವಿಲ್ಲ. ಸರ್ಕಾರ ಎರಡು ಕಂತುಗಳ ಹಣವನ್ನು ಇನ್ನೂ ಹಾಕಿಲ್ಲ. ಎರಡು ತಿಂಗಳಿಂದ ಹಣ ಹಾಕದ ಕಾರಣ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼಗೃಹಲಕ್ಷ್ಮಿʼ ಹಣ ಬರದಿರುವುದು ಒಂದೆಡೆಯಾದ್ರೆ, ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಶಿಷ್ಯವೇತನ ಸಹ ಸಿಕ್ಕಿಲ್ಲ.
ಶಕ್ತಿ ಯೋಜನೆಯಡಿ ಉಚಿತ ಪ್ರಯಾಣವಿದ್ದರೂ ಸರ್ಕಾರಿ ಬಸ್ಸುಗಳಲ್ಲಿ ಸೀಟು ಹಿಡಿಯಲು ಪ್ರತಿದಿನ ಜಗಳಗಳಾಗುತ್ತಿವೆ. ಮಹಿಳೆಯರ ಹೊಡೆದಾಟಕ್ಕೆ ಪುರುಷರು ಬೆಪ್ಪತಕ್ಕಡಿ ಆಗಿದ್ದಾರೆ. ಸರ್ಕಾರಿ ಬಸ್ಸುಗಳಲ್ಲಿ ಸೀಟು ಹಿಡಿಯುವುದೇ ದೊಡ್ಡ ಸಾಧನೆಯಾಗಿದೆ. ಕೂಡಲೇ ನಮಗೆ ಗೃಹಲಕ್ಷ್ಮಿ ಹಣವನ್ನು ಬಿಡುಗಡೆ ಮಾಡಿ ಅಂತಾ ಮಹಿಳೆಯರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅನೇಕರು ಹಿಡಿಶಾಪ ಹಾಕುತ್ತಿದ್ದಾರೆ. ನಾವು ಓಟು ಹಾಕಿ ಕಾಂಗ್ರೆಸ್ ಸರ್ಕಾರವನ್ನು ಗೆಲ್ಲಿಸಿದ್ದು ವಿಧಾನಸಭಾ ಚುನಾವಣೆಯಲ್ಲಿ, ಲೋಕಸಭಾ ಚುನಾವಣೆಯಲ್ಲಿ ಅಲ್ಲ. ಹೀಗಾಗಿ ನಮಗೆ ಸರ್ಕಾರದ ಯೋಜನೆಯ ಲಾಭ ಬೇಕೇಬೇಕು. ಕೂಡಲೇ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಕೆಎಸ್ಆರ್ಟಿಸಿ, ಬಿಎಂಟಿಸಿ ಚಾಲಕರು, ನಿರ್ವಾಹಕರು ರೀಲ್ಸ್ ಮಾಡಿದ್ರೆ ಅಮಾನತು: ಸಾರಿಗೆ ಇಲಾಖೆ ಖಡಕ್ ಎಚ್ಚರಿಕೆ


