Greater Bengaluru News9: ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ವಾರ್ಡ್ ಮರುವಿಂಗಡಣೆ ವೇಳೆ ವಾರ್ಡ್ಗಳ ಹೆಸರು ಬದಲಾವಣೆಗೆ ಅನುಸರಿಸಿರುವ ಮಾನದಂಡಗಳ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಹೆಮ್ಮಿಗೆಪುರ ವಾರ್ಡ್ ಅನ್ನು ಕೆಂಗೇರಿ ಕೋಟೆ ವಾರ್ಡ್ ಎಂದು ಬದಲಾಯಿಸಿರುವುದನ್ನು ಪ್ರಶ್ನಿಸಿ ಎಚ್.ಸಿ. ಬಸವರಾಜಪ್ಪ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿ ವಿಚಾರಣೆಯನ್ನು ಫೆ.5ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲರು ವಾದಿಸಿ, ಬಿಬಿಎಂಪಿ ರಚನೆಯ ಕಾಲದಿಂದಲೂ ಹೆಮ್ಮಿಗೆಪುರ ವಾರ್ಡ್ ಅಸ್ತಿತ್ವದಲ್ಲಿದೆ. ಜಿಬಿಎ ರಚನೆಯಾಗಿ ಹೊರಡಿಸಿದ ಮೊದಲು ಕರಡು ಪಟ್ಟಿಯಲ್ಲಿಯೂ ವಾರ್ಡ್ನ ಹೆಸರು ಹೆಮ್ಮಿಗೆಪುರ ಎಂದೇ ಇತ್ತು. ಸರ್ಕಾರ ನ.19ರಂದು ಹೊರಡಿಸಿದ ಅಂತಿಮ ಅಧಿಸೂಚನೆಯಲ್ಲಿ ಕೂಡ ಅದೇ ಹೆಸರು ಇತ್ತು. ಆದರೆ, ಯಾವುದೇ ಆಕ್ಷೇಪಣೆಗಳನ್ನು ಆಲಿಸದೆ ಡಿ.1ರಂದು ಹೊರಡಿಸಿರುವ ತಿದ್ದುಪಡಿ ಅಧಿಸೂಚನೆಯಲ್ಲಿ ಹೆಮ್ಮಿಗೆಪುರವನ್ನು ಕೆಂಗೇರಿ ಕೋಟೆ ವಾರ್ಡ್ ಎಂದು ಬದಲಾಯಿಸಲಾಗಿದೆ ಎಂದರು.
ನಿಯಮಗಳಲ್ಲಿ ಈ ರೀತಿ ಬದಲಾವಣೆ ಮಾಡಲು ಅವಕಾಶವಿಲ್ಲ. ಆದರೆ, ಸ್ಥಳಿಯ ಶಾಸಕರ ರಾಜಕೀಯ ಲಾಭಕ್ಕಾಗಿ ಹೆಸರು ಬದಲಾಯಿಸಲಾಗಿದೆ. ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ರ್ನಿದಿಷ್ಟ ಸಮುದಾಯವನ್ನು ಗಮನದಲ್ಲಿರಿಸಿ ಹೆಸರು ಬದಲಾಯಿಸಿದ್ದಾರೆ. ಇದು ಸರಿಯಲ್ಲ ಎಂದು ವಾದಿಸಿದರು.
ವಾದ ಆಲಿಸಿದ ನ್ಯಾಯಪೀಠ, ಮೀಸಲಾತಿ ನಿಗದಿ, ವಾರ್ಡ್ ವಿಂಗಡಣೆಗಳು ಕಾನೂನು ಪ್ರಕ್ರಿಯೆಯಾಗಿದೆ. ಆದರೆ, ಅದಕ್ಕಾಗಿ ಹೆಸರು ಬದಲಿಸುವ ಅಗತ್ಯವೇನು ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಈ ವೇಳೆ ಅನುಸರಿಸಿರುವ ಮಾನದಂಡವನ್ನು ತಿಳಿಸುವಂತೆ ಸೂಚನೆ ನೀಡಿದ ನ್ಯಾಯಾಲಯ ವಿಚಾರಣೆ ಮುಂದೂಡಿತು.


