BBMP
Loading ...

BBMP

Greata Bangalore news9: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳಿಗೆ ವಾರ್ಡ್‌ಗಳ ಮರು ವಿಂಗಡಣೆ ಮಾಡಿರುವ ನಗರಾಭಿವೃದ್ಧಿ ಇಲಾಖೆ ಗುರುವಾರ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಈ ಮೂಲಕ ಜಿಬಿಎ ಚುನಾವಣೆಗೆ ಕಾಲ ಸನ್ನಿಹಿತದಂತಿದೆ.

ಐದು ನಗರ ಪಾಲಿಕೆಗಳಲ್ಲಿ ಒಟ್ಟಾರೆ 369 ವಾರ್ಡ್‌ಗಳಿವೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಕರಡು ಅಧಿಸೂಚನೆಯಲ್ಲಿ 111 ವಾರ್ಡ್‌ಗಳಿದ್ದವು. ಅಂತಿಮ ಅಧಿಸೂಚನೆಯಲ್ಲಿ ಈ ಸಂಖ್ಯೆ 112 ಆಗಿದೆ. ಇನ್ನುಳಿದ ನಾಲ್ಕು ನಗರ ಪಾಲಿಕೆಗಳ ವಾರ್ಡ್‌ ಸಂಖ್ಯೆಯಲ್ಲಿ ಬದಲಾವಣೆಯಾಗಿಲ್ಲ.

18 ವರ್ಷಗಳ ಬಳಿಕ ಬೆಂಗಳೂರು ಮಹಾನಗರ ಪಾಲಿಕೆ ಯುಗಾಂತ್ಯಗೊಂಡಿದ್ದು, ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ಸೆಪ್ಟೆಂಬರ್ 2, 2025 ರಂದು ಜಾರಿಗೆ ಬಂದಿದೆ. ಇದರ ಅಡಿಯಲ್ಲಿ, ಬೆಂಗಳೂರು ನಗರವನ್ನು ಐದು ಹೊಸ ಪಾಲಿಕೆಗಳಾಗಿ ವಿಂಗಡಿಸಲಾಗಿದೆ. ಜಿಬಿಎಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿರುತ್ತಾರೆ ಮತ್ತು ಡಿಸಿಎಂ ಉಪಾಧ್ಯಕ್ಷರಾಗಿರುತ್ತಾರೆ.

ಬೆಂಗಳೂರು ಕೇಂದ್ರದಲ್ಲಿ 63, ಬೆಂಗಳೂರು ಪೂರ್ವದಲ್ಲಿ50, ಬೆಂಗಳೂರು ಪಶ್ಚಿಮದಲ್ಲಿ 112, ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣಕ್ಕೆ ತಲಾ 72 ವಾರ್ಡ್‌ಗಳಿವೆ.

ಜನವರಿಗೆ ಚುನಾವಣೆ?

ಜಿಬಿಎ ಚುನಾವಣೆ ಅಧಿಕೃತವಾಗಿ ಘೋಷಣೆಯಾದಿದ್ದರೂ ಆಡಳಿತರೂಢ ಕಾಂಗ್ರೆಸ್‌ ಪಕ್ಷವು ತಳಮಟ್ಟದಲ್ಲಿ ಸಿದ್ಧತೆ ಪ್ರಾರಂಭಿಸಿದೆ. ಅತ್ತ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸಹ ಜಿಬಿಎ ಚುನಾವಣೆಗೆ ಸಮನ್ವಯ ಸಮಿತಿ ರಚಿಸಿಕೊಂಡಿವೆ.

ಐದು ಪಾಲಿಕೆಗಳಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಗೆಲ್ಲಲು ಬೆಂಗಳೂರಿನ ಆರು ಸಚಿವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ.ಜಾರ್ಜ್‌, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹಾಗೂ ವಸತಿ ಸಚಿವ ಜಮೀರ್‌ ಅಹ್ಮದ್‌ ಅವರಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ ಹೊಣೆ ನೀಡಲಾಗಿದೆ.

ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಿಗೆ ನಡೆಯವ ಚುನಾವಣೆ ಸಂಬಂಧ ಬಿಜೆಪಿ ಗುರುವಾರ (ಅ.23) ಸಂಯೋಜಕರ ತಂಡವನ್ನು ರಚಿಸಿದೆ. ತಂಡದಲ್ಲಿ ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಡಿ.ವಿ.ಸದಾನಂದಗೌಡ, ಎಸ್‌.ಸುರೇಶ್‌ಕುಮಾ‌ರ್, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್,‌ ಡಾ.ಸಿ.ಎನ್.ಮಂಜುನಾಥ್, ತೇಜಸ್ವಿ ಸೂರ್ಯ, ಡಾ.ಕೆ.ಸುಧಾಕರ್ ಹಾಗೂ ಎನ್.ಎಸ್.ನಂದೀಶ್ ರೆಡ್ಡಿ ಇದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲಿಗೆ ಸಿ.ಕೆ.ರಾಮಮೂರ್ತಿ, ಬೆಂಗಳೂರು ಉತ್ತರಕ್ಕೆ ಎಸ್.ಹರೀಶ್ ಹಾಗೂ ಬೆಂಗಳೂರು ಕೇಂದ್ರಕ್ಕೆ ಎ.ಆ‌ರ್. ಸಪ್ತಗಿರಿಗೌಡ ಅವರು ಸಂಘಟನಾತ್ಮಕ ಉಸ್ತುವಾರಿಗಳಾಗಿದ್ದಾರೆ. ಪಾಲಿಕೆ ವಿಚಾರವಾಗಿ ಬೆಂಗಳೂರು ಪೂರ್ವಕ್ಕೆ ಎಂ.ಟಿ.ಬಿ.ನಾಗರಾಜ್, ಕೆ.ಎಸ್.ನವೀನ್, ಬೆಂಗಳೂರು ಉತ್ತರಕ್ಕೆ ಮುನಿರತ್ನ, ಭಾರತಿಶೆಟ್ಟಿ, ಬೆಂಗಳೂರು ದಕ್ಷಿಣಕ್ಕೆ ಬಿ.ಎ.ಬಸವರಾಜ್, ಎನ್.ರವಿಕುಮಾರ್, ಬೆಂಗಳೂರು ಕೇಂದ್ರಕ್ಕೆ ಡಾ.ಸಿ.ಎನ್. ಅಶ್ವತ್ಥನಾರಾಯಣ, ಡಿ.ಎಸ್.ಅರುಣ್‌ ಹಾಗೂ ಬೆಂಗಳೂರು ಪಶ್ಚಿಮಕ್ಕೆ ಕೆ.ಗೋಪಾಲಯ್ಯ, ಎ.ನಾರಾಯಣ ಸ್ವಾಮಿ, ಅಶ್ವತ್ಥನಾರಾಯಣ ಉಸ್ತುವಾರಿಗಳಾಗಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ಚುನಾವಣೆ 2026ರ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮುಂಬರುವ 2028 ರಾಜ್ಯ ವಿಧಾನಸಭಾ ಚುನಾವಣೆಗೆ ರಾಜಕೀಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.

Leave a Reply

Your email address will not be published. Required fields are marked *