BBMP
Loading ...

War Drill

ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಯುದ್ಧದ ಕರಿಛಾಯೆ ಆವರಿಸಿದೆ. ಈಗಾಗಲೇ ಪಹಲ್ಗಾಮ್ ದಾಳಿಕೋರರ ಶೋಧ ಮತ್ತು ಉಗ್ರ ನಿಗ್ರಹಕ್ಕೆ ಸೇನಾಪಡೆ ಶೋಧ ಕಾರ್ಯಾಚರಣೆ ನಡೆಸಿದೆ. ಉಗ್ರ ದಾಳಿಗೆ ಕುಮ್ಮಕ್ಕು ನೀಡಿದ ಪಾಕಿಸ್ತಾನದ ವಿರುದ್ಧ ಭಾರತ ರಾಜತಾಂತ್ರಿಕ ಸಮರ ಸಾರಿದ್ದು, ಅದರ ಮುಂದುವರಿದ ಭಾಗವಾಗಿ ಈಗ ಪೌರರಿಗೆ ಸ್ವರಕ್ಷಣೆ ತಾಲೀಮು ನಡೆಸುವುದಕ್ಕಾಗಿ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ.

ಭಾರತದ 244 ವರ್ಗೀಕೃತ ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ಬುಧವಾರ (ಮೇ 7) ಅಣಕು ಸಮರ ಅಥವಾ ಯುದ್ಧ ತಾಲೀಮು ನಡೆಸಬೇಕು ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ. ಪ್ರಸ್ತುತ ಭೌಗೋಳಿಕ ಹಾಗೂ ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ಹೊಸ ಹಾಗೂ ಸಂಕೀರ್ಣ ಬೆದರಿಕೆಗಳು ಎದುರಾಗಿದ್ದು, ಅದನ್ನು ಎದುರಿಸುವ ನಿಟ್ಟಿನಲ್ಲಿ ಪೌರರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಸರ್ಕಾರ ಹೇಳಿದೆ.

ಜಮ್ಮು- ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ಕರ್ನಾಟಕದ ಇಬ್ಬರು ಸೇರಿ 26 ಪ್ರವಾಸಿಗರ ಹತ್ಯೆಗೆ ಕಾರಣವಾದ ಪಹಲ್ಗಾಮ್ ಉಗ್ರ ದಾಳಿಗೆ ಭಾರತ ಸರ್ಕಾರ ಪ್ರತ್ಯುತ್ತರ ನೀಡುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ಸರಣಿ ಸಭೆ ಬಳಿಕ ಕೇಂದ್ರ ಗೃಹ ಸಚಿವಾಲಯ ಈ ನಿರ್ದೇಶನ ನೀಡಿದೆ.

ಭಾರತದ ರಾಜತಾಂತ್ರಿಕ ನಡೆಗಳು ಪಾಕಿಸ್ತಾನದೊಳಗೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಕ್ಷಿಪಣಿ ಪರೀಕ್ಷೆ ಪ್ರಯೋಗ ಯಶಸ್ವಿಯಾಗಿದೆ. ಇದರೊಂದಿಗೆ ಪಾಕ್ ಸೇನಾಬಲ ಹೆಚ್ಚಾಗಿದೆ ಎಂದು ಘೋಷಿಸಿದರು. ಹೀಗೆ, ಪಾಕಿಸ್ತಾನವು ಎಕ್ಸರ್ಸೈಸ್ ಇಂಡಸ್ ಎಂಬ ಹೆಸರಿನಲ್ಲಿ ಎರಡನೇ ಕ್ಷಿಪಣಿ ಪರೀಕ್ಷೆ ನಡೆಸಿದ ಎರಡು ದಿನಗಳ ಬಳಿಕ ಭಾರತದ ಗೃಹ ಸಚಿವಾಲಯ ಈ ಆದೇಶ ನೀಡಿದೆ ಎಂಬುದು ಕೂಡ ಗಮನಾರ್ಹ.

ಕೇಂದ್ರ ಗೃಹ ಸಚಿವಾಲಯದ ಸೂಚನೆಯಲ್ಲಿ ಏನಿದೆ; 9 ಮುಖ್ಯ ಅಂಶಗಳಿವು
“ಪ್ರಸ್ತುತ ಭೌಗೋಳಿಕ-ರಾಜಕೀಯ ಸನ್ನಿವೇಶದಲ್ಲಿ, ಹೊಸ ಮತ್ತು ಸಂಕೀರ್ಣ ಬೆದರಿಕೆಗಳು/ಸವಾಲುಗಳು ಹೊರಹೊಮ್ಮಿವೆ, ಆದ್ದರಿಂದ, ರಾಜ್ಯಗಳು/ಯುಟಿಗಳಲ್ಲಿ ಗರಿಷ್ಠ ನಾಗರಿಕ ರಕ್ಷಣಾ ಸನ್ನದ್ಧತೆಯನ್ನು ಎಲ್ಲಾ ಸಮಯದಲ್ಲೂ ನಿರ್ವಹಿಸುವುದು ವಿವೇಕಯುತವಾಗಿದೆ” ಎಂದು ಡೈರೆಕ್ಟರೇಟ್ ಜನರಲ್ ಫೈರ್ ಸರ್ವಿಸ್, ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್‌ಗಳ ನಿರ್ದೇಶನಾಲಯದ ಪತ್ರವು ವಿವರಿಸಿದೆ. ಕೇಂದ್ರ ಗೃಹ ಸಚಿವಾಲಯವು ರಾಜ್ಯಗಳಿಗೆ ಕಳುಹಿಸಿದ ಆದೇಶದಲ್ಲಿ ಅಣಕು ಸಮರ ಅಥವಾ ಅಣಕು ಕಾರ್ಯಾಚರಣೆ ಅಥವಾ ಯುದ್ಧ ತಾಲೀಮು ಕೈಗೊಳ್ಳುತ್ತಿರುವುದಕ್ಕೆ ಕಾರಣವಾಗಿರುವ 9 ಮುಖ್ಯ ಅಂಶಗಳಿವು ಎಂದು ವಿವರಿಸಿದೆ.

1) ವಾಯುದಾಳಿ ಎಚ್ಚರಿಕೆ ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ನಿರ್ಣಯಿಸುವುದಕ್ಕೆ

2) ಹಾಟ್‌ಲೈನ್‌/ರೇಡಿಯೋ ಸಂವಹನ ಲಿಂಕ್‌ಗಳನ್ನು ಭಾರತೀಯ ವಾಯುಪಡೆ ಜತೆಗೆ ಜೋಡಿಸಿ ಕಾರ್ಯಾಚರಣೆಗೆ ಸಿದ್ಧಮಾಡಿಟ್ಟುಕೊಳ್ಳುವುದಕ್ಕೆ

3) ನಿಯಂತ್ರಣ ಕೊಠಡಿಗಳು ಹಾಗೂ ಛಾಯಾ ನಿಯಂತ್ರಣ ಕೊಠಡಿಗಳ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುವುದಕ್ಕೆ

4) ಪೌರರು/ನಾಗರಿಕರು, ವಿದ್ಯಾರ್ಥಿಗಳು ಮತ್ತು ಇತರರು ನಾಗರಿಕ ರಕ್ಷಣೆ ದೃಷ್ಟಿಯಿಂದ ಸ್ವರಕ್ಷಣೆಗೆ ಬೇಕಾದ ಅರಿವು ಪಡೆದುಕೊಳ್ಳುವುದಕ್ಕೆ. ಒತ್ತೆಯಾಳುಗಳಾಗಿ ಬಂಧಿಯಾಗುವ ಸಂದರ್ಭ ಬಂದಾಗ ಏನು ಮಾಡಬೇಕು ಎಂಬುದನ್ನು ಅರಿಯಲು

5) ತುರ್ತು ಕಾರ್ಗತ್ತಲು ಕ್ರಮಗಳನ್ನು ಜಾರಿಗೊಳಿಸುವುದು ಅಥವಾ ಕ್ರ್ಯಾಶ್ ಬ್ಲ್ಯಾಕೌಟ್‌ ಉಪಕ್ರಮಗಳು

6) ಪ್ರಮುಖ ಘಟಕಗಳು/ಸ್ಥಾಪನೆಗಳ ಆರಂಭಿಕ ಮರೆಮಾಚುವಿಕೆಗೆ ಅವಕಾಶ ಮಾಡಿಕೊಡುವುದು

7) ವಾರ್ಡನ್ ಸೇವೆಗಳು, ಅಗ್ನಿಶಾಮಕ, ಪಾರುಗಾಣಿಕಾ ಕಾರ್ಯಾಚರಣೆಗಳು ಮತ್ತು ಡಿಪೋ ನಿರ್ವಹಣೆ ಸೇರಿ ನಾಗರಿಕ ರಕ್ಷಣಾ ಸೇವೆಗಳ ಸಕ್ರಿಯಗೊಳಿಸುವಿಕೆ ಮತ್ತು ಪ್ರತಿಸ್ಪಂದನಾ ಕಾರ್ಯಾಚರಣೆ ಪರಿಶೀಲಿಸುವುದಕ್ಕೆ

8) ತುರ್ತು ಕಾರ್ಗತ್ತಲು ಕ್ರಮಗಳನ್ನು ಜಾರಿಗೊಳಿಸುವುದು ಅಥವಾ ಕ್ರ್ಯಾಶ್ ಬ್ಲ್ಯಾಕೌಟ್‌ ಉಪಕ್ರಮಗಳ ಅನುಷ್ಠಾನದ ಮೌಲ್ಯಮಾಪನಕ್ಕೆ

9) ಸ್ಥಳಾಂತರಿಸುವ ಯೋಜನೆಗಳ ಸನ್ನದ್ಧತೆ ಮತ್ತು ಅವುಗಳ ಅನುಷ್ಠಾನವನ್ನು ಮೌಲ್ಯಮಾಪನ ಮಾಡುವುದಕ್ಕೆ ಅನುಕೂಲ.

ಗ್ರಾಮ ಮಟ್ಟದಲ್ಲೂ ನಡೆಯಲಿದೆ ಅಣಕು ಸಮರ ಕಾರ್ಯಾಚರಣೆ
ಭಾರತದ ಪ್ರತಿ ಹಳ್ಳಿಯಲ್ಲೂ ಮೇ 7ರ ಅಣಕು ಸಮರ ಕಾರ್ಯಾಚರಣೆ ನಡೆಯಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಸೂಚನೆ ನೀಡಿದೆ. ಅಲ್ಲಿ ನಾಗರಿಕ ರಕ್ಷಣಾ ಕಾರ್ಯವಿಧಾನಗಳ ಸಿದ್ಧತೆ ಜಾಗೃತಗೊಳಿಸುವ ಹಾಗೂ ಹೆಚ್ಚಿಸುವ ಗುರಿ ಈ ಕಾರ್ಯಾಚರಣೆಯದ್ದು ಎಂದು ಗೃಹ ಸಚಿವಾಲಯದ ಆದೇಶ ತಿಳಿಸಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ, ನಾಗರಿಕ ರಕ್ಷಣಾ ವಾರ್ಡನ್‌ಗಳು, ಯುವಕ ಸಂಘ, ಮಹಿಳಾ ಸ್ವಸಹಾಯ ಸಂಘದವರು, ಗೃಹ ರಕ್ಷಕ ದಳದವರು (ಸಕ್ರಿಯರು ಹಾಗೂ ಮೀಸಲು ಇರುವಂಥವರು), ಎನ್‌ಸಿಸಿ, ಎನ್ಎಸ್‌ಎಸ್‌, ನೆಹರು ಯುವ ಕೇಂದ್ರ ಸಂಘಟನ್ ಮತ್ತು ಕಾಲೇಜು, ಶಾಲಾ ವಿದ್ಯಾರ್ಥಿಗಳು ಇದರಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕು ಎಂದು ಗೃಹ ಸಚಿವಾಲಯ ಬಯಸಿದೆ.

ಬೆಂಗಳೂರಿಗರೇ ಎಚ್ಚರ! ನೀವು ಬಾಯ್ತುಂಬ ಸವಿಯುವ ಜಿಲೇಬಿ-ಶರಬತ್ತಿನಲ್ಲೂ ಇದೆ ಕೃತಕ ಬಣ್ಣ

Leave a Reply

Your email address will not be published. Required fields are marked *