ಬೆಂಗಳೂರು: ನಿವೃತ್ತ ನ್ಯಾಯಧೀಶರ ನೇತೃತ್ವದಲ್ಲಿ ಜಾತಿ ಜನಗಣತಿ ಸಮೀಕ್ಷೆ ನಡೆಸಬೇಕೆಂದು ರಾಜ್ಯ ಒಕ್ಕಲಿಗರ ಸಂಘವು ಸರ್ಕಾರಕ್ಕೆ ಮನವಿ ಮಾಡಿದೆ.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯರಾಗಿದ್ದ ಕಾಂತರಾಜು ಅವಧಿಯಲ್ಲಿ ಸಿದ್ಧಪಡಿಸಲಾಗಿದ್ದ ವರದಿ ಅವೈಜ್ಷಾನಿಕವಾಗಿತ್ತು. ವರದಿ ತಯಾರಿಸಿ 9 ವರ್ಷಗಳಾಗಿದ್ದವು. 10 ವರ್ಷಕ್ಕೊಮ್ಮೆ ಸಮೀಕ್ಷೆ ನಡೆಸಬೇಕೆಂಬ ನಿಯಮ ಇರುವುದರಿಂದ ಆ ವರದಿ ಅಪ್ರಸ್ತುತವಾಗಿತ್ತು. ಹಳೆಯ ವರದಿ ತಿರಸ್ಕರಿಸಿ ಹೊಸದಾಗಿ ಸರ್ವೇಗೆ ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಆದರೆ, ಹಳೆಯ ವರದಿ ಪರಿಶೀಲಿಸಿ ಸರಿಪಡಿಸುವಂತೆ ಹೇಳುತ್ತಿರುವುದು ಸರಿಯಲ್ಲ. ಡಿಜಿಟಲ್ ಸೌಲಭ್ಯ ಬಳಸಿ ಸರ್ವೇ ನಡೆಸಬೇಕು. ಹಿಂದೆ ಆಗಿರುವ ತಪ್ಪನ್ನು ಮತ್ತೆ ಮಾಡಬಾರದು. ಇದಕ್ಕೆ ರಾಜಕೀಯ ಪ್ರತಿನಿಧಿಗಳು ಸಹಕಾರ ನೀಡಬೇಕೆಂದು ಸಂಘದ ಅಧ್ಯ ಬಿ.ಕೆಂಚಪ್ಪಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೊಸದಾಗಿ ಸರ್ವೇ ನಡೆಸುವ ಸಂದರ್ಭದಲ್ಲಿ ಜಿಲ್ಲಾ, ತಾಲೂಕಿನ ಹಂತದಲ್ಲಿ ಸಮುದಾಯದ ಮುಖಂಡರು ಸಹಕಾರ ನೀಡುತ್ತಾರೆ. ಬೇರೆ ಸಮುದಾಯಗಳು ಸಹ ಸಹಕಾರ ನೀಡಬೇಕು. 3 ತಿಂಗಳ ಅವಧಿಯಲ್ಲಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. ವಿಳಂಬವಾದರೂ ಸೂಕ್ತವಾಗಿ ನಡೆಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರವು ಸರ್ವೇ ನಡೆಸಿದ್ದರೂ ಪ್ರತ್ಯೇಕವಾಗಿ ಸಂದಿಂದ ಡಿಜಿಟಲ್ ಸರ್ವೇ ಮಾಡಲಾಗುವುದು ಎಂದು ಕೆಂಚಪ್ಪಗೌಡ ತಿಳಿಸಿದರು. ಸಂಘದ ಗೌರವಾಧ್ಯಕ್ಷ ಎಳುವಳ್ಳಿ ರಮೇಶ್, ಉಪಾಧ್ಯಕ್ಷ ಎಲ್.ಶ್ರೀನಿವಾಸ್, ಸಂಘದ ದಂತ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಜಿ. ರಾಜು, ಖರೀದಿ ಸಮಿತಿ ಅಧ್ಯಕ್ಷ ವೆಂಕಟರಾಮೇಗೌಡ ಸೇರಿ ಮತ್ತಿತರರಿದ್ದರು.
ಹೊಸದಾಗಿ ಸರ್ವೇ ಮಾಡುವುದಕ್ಕೆ ಕೆಲವರು ವಿರೋಧ ಮಾಡುವುದು ಸರಿಯಲ್ಲ. ರಾಜ್ಯದಲ್ಲಿ 6 ಸಾವಿರಕ್ಕೂ ಅಧಿಕ ಗ್ರಾಮಗಳಿವೆ. ಪ್ರತಿ ಹಳ್ಳಿಗಳಿಗೆ ಅಧಿಕಾರಿಯನ್ನು ನೇಮಿಸಿ ಸಮರ್ಪಕವಾಗಿ ಅಂಕಿಅಂಶ ಕ್ರೋಡಿಕರಿಸಿದರೆ ಸಮಗ್ರ ಮಾಹಿತಿ ಸಿಗುತ್ತದೆ. ವೈಜ್ಞಾನಿಕ ಸಮೀಕ್ಷೆಯಿಂದ ಎಲ್ಲ ಸಮಾಜಕ್ಕೂ ಸೂಕ್ತ ಸೌಲಭ್ಯ ನೀಡಲು ಅನುಕೂಲವಾಗುತ್ತದೆ ಎಂದು ಸಂಘದ ಕಾರ್ಯಾಧ್ಯಕ್ಷ ಬಾಗೂರು ಮಂಜೇಗೌಡ ಹೇಳಿದರು.
10 ವರ್ಷದ ಹಿಂದಿನ ವರದಿಗೆ ಕಾರ್ಯದರ್ಶಿ ಸಹಿ, ಮೂಲ ಪ್ರತಿ ಇರಲಿಲ್ಲ. ಹೊಸ ಸಮೀಕ್ಷೆಯಲ್ಲಿ ಆಧಾರ್ ಲಿಂಕ್ ಇರಬೇಕು. ದತ್ತಾಂಶ ಬೇರೆ ಬೇರೆಯಾಗಿರಬೇಕು. ಆರ್ಥಿಕ ಸ್ಥಿತಿಗತಿಗೆ ಜಿಯೋ ಟ್ಯಾಗ್ ಮಾಡಬೇಕು. ಇದರಿಂದ ಆ ವ್ಯಕ್ತಿಯ ಆರ್ಥಿಕ ಸ್ಥಿತಿಗತಿ ತಿಳಿಯಲಿದೆ. 10 ವರ್ಷದಲ್ಲಿ ಹಿಂದುಳಿದಿರುವವರು ಆಗಿರುವ ಬದಲಾವಣೆ ಬಗ್ಗೆ ತಿಳಿದುಕೊಂಡು ಸೌಲಭ್ಯ ನೀಡುವಂತಾಗಬೇಕು. ಕರಾರುವಕ್ಕಾಗಿ ಮಾಡಿದರೆ ಎಲ್ಲ ಸಮುದಾಯಗಳಿಗೆ ನ್ಯಾಯ ಸಿಗುತ್ತದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ ಹೇಳಿದರು.
ಚಿಕ್ಕಬಳ್ಳಾಪುರಕ್ಕೆ ಕರೆಂಟ್ ಶಾಕ್ ಆತಂಕ! ವಿದ್ಯುತ್ ಅವಘಡದಲ್ಲಿ 4 ವರ್ಷದಲ್ಲಿ 29 ಸಾವು


