BBMP
Loading ...

Vijayalakshmi Darshan

ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡ, ದರ್ಶನ್ ಮುಂತಾದವರ ಜಾಮೀನನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರದ್ದು ಮಾಡಿತು. ಅದಕ್ಕೂ ಮುನ್ನ ದರ್ಶನ್ ಅವರು ‘ದಿ ಡೆವಿಲ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಅವರು ಜೈಲು ಸೇರಿದ್ದರಿಂದ ಸಿನಿಮಾದ ಬಿಡುಗಡೆ ತಡ ಆಗಬಹುದು ಎಂದು ಊಹಿಸಲಾಯಿತು. ಆದರೆ ಚಿತ್ರಕ್ಕೆ ಯಾವುದೇ ತೊಂದರೆ ಆಗದಂತೆ ಕೆಲಸ ಮುಂದುವರಿಸಲು ದರ್ಶನ್ ಸೂಚಿಸಿದ್ದಾರೆ. ಅದರ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಆದಷ್ಟು ಬೇಗ ದರ್ಶನ್ ಅವರು ಜೈಲಿನಿಂದ ಹೊರಗೆ ಬರುತ್ತಾರೆ ಎಂದು ವಿಜಯಲಕ್ಷ್ಮಿ ಅವರು ಭರವಸೆ ಹೊಂದಿದ್ದಾರೆ. ಇನ್ಮುಂದೆ ದರ್ಶನ್ ಹಾಗೂ ಸಿನಿಮಾ ಬಗ್ಗೆ ತಾವೇ ಅಪ್ಡೇಟ್ ನೀಡುವುದಾಗಿ ಅವರು ಹೇಳಿದ್ದಾರೆ. ‘ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ‘ದಿ ಡೆವಿಲ್’ ಸಿನಿಮಾದ ಹೊಸ ಪೋಸ್ಟರ್​ ಅನ್ನು ವಿಜಯಲಕ್ಷ್ಮಿ ದರ್ಶನ್ ಅವರು ಹಂಚಿಕೊಂಡಿದ್ದಾರೆ.

‘ನಿಮ್ಮ ಚಾಲೆಂಜಿಂಗ್ ಸ್ಟಾರ್ ಹೃದಯದಲ್ಲಿ ನೀವೆಲ್ಲರೂ ಇದ್ದೀರಿ. ಅವರು ನೇರವಾಗಿ ನಿಮ್ಮನ್ನು ಸಂಪರ್ಕಿಸುವ ತನಕ ನಾನು ಅವರ ಸೋಶಿಯಲ್ ಮೀಡಿಯಾ ಖಾತೆಯನ್ನು ನಿರ್ವಹಿಸುತ್ತೇನೆ. ಅವರ ಪರವಾಗಿ ಅಪ್​ಡೇಟ್​ ನೀಡುತ್ತೇನೆ ಮತ್ತು ಸಿನಿಮಾ ಪ್ರಮೋಷನ್ ಮಾಡುತ್ತೇನೆ’ ಎಂದು ವಿಜಯಲಕ್ಷ್ಮಿ ದರ್ಶನ್ ಅವರು ಪೋಸ್ಟ್ ಮಾಡಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿಯೂ ಇಂಥ ನಿರ್ಧಾರ ತೆಗೆದುಕೊಂಡ ಅವರ ಗಟ್ಟಿತನಕ್ಕೆ ಫ್ಯಾನ್ಸ್ ಭೇಷ್ ಎಂದಿದ್ದಾರೆ.

‘ಪ್ರೀತಿ, ಪ್ರಾರ್ಥನೆ ಮತ್ತು ತಾಳ್ಮೆ ತೋರಿಸುವುದನ್ನು ನೀವು ಮುಂದುವರಿಸಿದರೆ ಅದು ದರ್ಶನ್ ಅವರಿಗೆ ಮತ್ತು ನಮ್ಮ ಕುಟುಂಬಕ್ಕೆ ಬಲ ನೀಡುತ್ತದೆ. ಪಾಸಿಟಿವ್ ಆಗಿರೋಣ, ಒಂದಾಗಿರೋಣ. ನಿಮಗೆ ತಿಳಿದಿರುವ ಅದೇ ಪ್ರೀತಿ ಮತ್ತು ಎನರ್ಜಿಯೊಂರಿಗೆ ಅವರು ಆದಷ್ಟು ಬೇಗ ವಾಪಸ್ ಬರುತ್ತಾರೆ’ ಎಂದು ಹೇಳುವ ಮೂಲಕ ವಿಜಯಲಕ್ಷ್ಮಿ ಅವರು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸಿಲುಕಿಕೊಂಡ ಬಳಿಕ ಅವರ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನಕ್ಕೆ ಪೆಟ್ಟು ಬಿದ್ದಿದೆ. ಜೈಲು, ಕೋರ್ಟು ಅಲೆಯುವುದರಲ್ಲೇ ದಿನಗಳು ಕಳೆಯುತ್ತಿವೆ. ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದ ಬಳಿಕವಂತೂ ಅವರಿಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದೆ. ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿದೆ.

Leave a Reply

Your email address will not be published. Required fields are marked *