BBMP
Loading ...

Kannada

ಕರ್ನಾಟಕದಲ್ಲೇ ಇದ್ದುಕೊಂಡು, ಇಲ್ಲಿನ ನೆಲ, ಜಲ, ಗಾಳಿ, ಆಹಾರ ಸೇರಿದಂತೆ ಎಲ್ಲ ಅನುಕೂಲಗಳನ್ನು ಪಡೆದುಕೊಳ್ಳುತ್ತಾ ಕನ್ನಡ ಭಾಷೆಯನ್ನೇ ಕೀಳಾಗಿ ನೋಡುವ ಕೀಳು ಮನಸ್ಸಿನ ಮಂದಿ ನಮ್ಮ ನಡುವೆ ಇರುವುದು ನಿಜಕ್ಕೂ ದುರಾದೃಷ್ಟಕರ. ಕನ್ನಡ ಭಾಷೆಯ ಮೇಲೆ ದರ್ಪ ತೋರಿರುವ ಸಾಕಷ್ಟು ಪ್ರಕರಣಗಳನ್ನು ನಾವು ನೋಡಿದ್ದೇವೆ. ಇದೀಗ, ಆ ಪಟ್ಟಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ಕರ್ನಾಟಕದಲ್ಲಿ ಎಂದಿಗೂ ನಾನು ಕನ್ನಡ ಮಾತನಾಡುವುದೇ ಇಲ್ಲ ಎಂದು ಬೆಂಗಳೂರಿನ ಚಂದಾಪುರದ ಎಸ್‌ಬಿಐ ಬ್ಯಾಂಕ್‌ ಲೇಡಿ ಮ್ಯಾನೇಜರ್‌ ದರ್ಪ ತೋರಿದ್ದು, ಆಕೆ ನಡೆಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಖಂಡಿಸಿದ್ದಾರೆ.

ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿರುವ ಎಸ್‌ಬಿಐ ಶಾಖಾ ವ್ಯವಸ್ಥಾಪಕರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಲು ನಿರಾಕರಿಸಿ ನಾಗರಿಕರ ಬಗ್ಗೆ ನಿರ್ಲಕ್ಷ್ಯ ತೋರಿರುವುದು ತೀವ್ರವಾಗಿ ಖಂಡನೀಯವಾಗಿದೆ. ಆ ಅಧಿಕಾರಿಯನ್ನು ವರ್ಗಾವಣೆ ಮಾಡಿದ ಎಸ್‌ಬಿಐನ ತ್ವರಿತ ಕ್ರಮವನ್ನು ನಾವು ಪ್ರಶಂಸಿಸುತ್ತೇವೆ. ಈ ವಿಷಯ ಈಗ ಮುಕ್ತಾಯಗೊಂಡಿದೆ ಎಂದು ಪರಿಗಣಿಸಬಹುದು. ಆದಾಗ್ಯೂ, ಇಂತಹ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಭಾರತದಾದ್ಯಂತ ಎಲ್ಲಾ ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿಯನ್ನು ಕಡ್ಡಾಯಗೊಳಿಸಬೇಕೆಂದು ನಾನು ಕೇಂದ್ರದ ಹಣಕಾಸು ಸಚಿವಾಲಯ ಮತ್ತು ಹಣಕಾಸು ಸೇವೆಗಳ ಇಲಾಖೆಯನ್ನು ಒತ್ತಾಯಿಸುತ್ತೇನೆ. ಸ್ಥಳೀಯ ಭಾಷೆಯನ್ನು ಗೌರವಿಸುವುದು ಎಂದರೆ ಜನರನ್ನು ಗೌರವಿಸುವುದು ಎಂದರ್ಥ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್​ ಖಾತೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಕನ್ನಡವೇ ಮೊದಲು (#KannadaFirst) ಎಂದು ಹ್ಯಾಶ್​ಟ್ಯಾಗ್​ ಸಹ ಬಳಸಿದ್ದಾರೆ.

ಏನಿದು ಪ್ರಕರಣ?
ಬೆಂಗಳೂರಿನ ಚಂದಾಪುರದಲ್ಲಿರುವ ಎಸ್‌ಬಿಐ ಬ್ಯಾಂಕಿನ ಮಹಿಳಾ ಮ್ಯಾನೇಜರ್‌ ಕನ್ನಡದ ಬಗ್ಗೆ ಅಸಡ್ಡೆ ಮಾತುಗಳನ್ನಾಡಿದ್ದರು. ಬ್ಯಾಂಕ್‌ಗೆ ಹೋಗಿದ್ದ ಕನ್ನಡಿಗರು ಕನ್ನಡದಲ್ಲಿ ಸೇವೆ ಕೊಡಿ ಎಂದು ಕೇಳಿದ್ದಕ್ಕೆ, ಅದು ಆಗುವುದಿಲ್ಲ ಎಂದು ಉದ್ಧಟತನದಿಂದ ಮಾತನಾಡಿದ್ದರು. ಇದು ಕರ್ನಾಟಕ ಎಂದು ಹೇಳಿದ್ದಕ್ಕೆ ಕರ್ನಾಟಕ ಆದರೆ ನನಗೇನು? ಇದು ಇಂಡಿಯಾ, ಹಾಗಾಗಿ ನಾನು ಹಿಂದಿಯಲ್ಲೇ ಮಾತನಾಡುತ್ತೇನೆ. ಏನಾದರೂ ಮಾಡಿಕೊಳ್ಳಿ ನಾನು ಎಂದಿಗೂ ಕನ್ನಡದಲ್ಲಿ ಮಾತನಾಡಲ್ಲ ಎಂದು ಸವಾಲು ಹಾಕಿದ್ದರು. ಇದನ್ನು ವಿಡಿಯೋ ಮಾಡಿಕೊಂಡಿದ್ದ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಿಡಿಯೋ ವೈರಲ್​ ಆದ ಬಳಿಕ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಕಾಟಾಚಾರಕ್ಕೆ ಕ್ಷಮೆಯಾಚನೆ
ಯಾವಾಗ ವಿಡಿಯೋ ವೈರಲ್​ ಆಗಿ ಆಕ್ರೋಶ ವ್ಯಕ್ತವಾಯ್ತೋ ಬೆದರಿದ ಲೇಡಿ ಮ್ಯಾನೇಜರ್​ ಕಾಟಾಚಾರಕ್ಕೆ ಕ್ಷಮೆಯಾಚಿಸಿದ್ದರು. ತನ್ನ ಮುಖದಲ್ಲಿ ಯಾವುದೇ ಪಶ್ಚಾತಾಪ ಇಲ್ಲದೇ ನಗು ಮುಖದಿಂದ ಕ್ಷಮೆ ಕೋರಿದ್ದರು. ಯಾರಾದರೂ ನಗುತ್ತಾ ಕ್ಷಮೆ ಕೋರುತ್ತಾರಾ? ಇದೆಂಥಾ ಕ್ಷಮೆಯಾಚನೆ? ಮೇಲಿನವರ ಒತ್ತಾಯಕ್ಕಷ್ಟೇ ಆಕೆ ಕ್ಷಮೆ ಕೇಳಿದ್ದಾಳೆ. ಈ ಕ್ಷಮೆ ಬೇಕಾಗಿಲ್ಲ. ಆಕೆಯ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು ಎಂದು ಎಸ್​ಬಿಐ ಆಡಳಿತ ಮಂಡಳಿ ಬಳಿ ಕನ್ನಡಿಗರು ಒತ್ತಾಯ ಮಾಡಿದರು. ಈ ಪ್ರಕರಣದ ಗಂಭೀರತೆಯನ್ನು ಅರಿತ ಎಸ್​ಬಿಐ ಕೂಡಲೇ ಲೇಡಿ ಮ್ಯಾನೇಜರ್​ ಅನ್ನು ವರ್ಗಾವಣೆ ಮಾಡಿದೆ.

ಗೃಹಸಚಿವ ಡಾ.ಜಿ.ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ’ ಮೇಲೆಇಡಿ’ ದಾಳಿ

Leave a Reply

Your email address will not be published. Required fields are marked *