BBMP
Loading ...

KGopalaiah

Greater Bengaluru News9 : ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಂಡರ್‌ಪಾಸ್‌ ಕಾಮಗಾರಿ ದುರಂತಕ್ಕೆ ಅಧಿಕಾರಿಗಳ ಹಾಗೂ ಗುತ್ತಿಗೆದಾರ ಅಸಡ್ಡೆ ಮತ್ತು ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಶಾಸಕ ಕೆ. ಗೋಪಾಲಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

​ಘಟನಾ ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದುರಂತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಮತ್ತೊಬ್ಬರ ಮೃತದೇಹ ಮಣ್ಣಿನಡಿಯಲ್ಲಿರುವುದು ಕಂಡುಬಂದಿದೆ. ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

​”ಮಳೆಗಾಲದ ಸಮಯದಲ್ಲಿ ಇಂತಹ ಬೃಹತ್ ಅಂಡರ್‌ಪಾಸ್‌ ಕಾಮಗಾರಿಗಳನ್ನು ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಅಧಿಕಾರಿಗಳು ಹಾಗೂ ತಜ್ಞರು ಯೋಚಿಸಬೇಕಿತ್ತು. ಇದು ಸಣ್ಣ ಚರಂಡಿ ಕಾಮಗಾರಿಯಲ್ಲ. ಮಳೆಯ ನೀರು ನಿಂತಾಗ ಅದನ್ನು ತೆರವುಗೊಳಿಸುವಾಗ ಈ ದುರಂತ ಸಂಭವಿಸಿದೆ. ಸುಮಾರು 18 ರಿಂದ 19 ಅಡಿ ಎತ್ತರದ ಮಣ್ಣಿನ ಕುಸಿತದಿಂದಾಗಿ ಐದು ಜನರ ಮೇಲೆ ಮಣ್ಣು ಬಿದ್ದಿದೆ. ಮಳೆಗಾಲಕ್ಕೆ ಮುನ್ನವೇ ಇಂತಹ ಕಾಮಗಾರಿಗಳನ್ನು ಮುಗಿಸಬೇಕಿತ್ತು” ಎಂದು ಕೆ. ಗೋಪಾಲಯ್ಯ ಕಿಡಿಕಾರಿದರು.

​”ನಾನು ಶಾಸಕನಾಗುವ ಮುನ್ನವೇ ಪ್ರಾರಂಭವಾಗಿದ್ದ ಈ ಕಾಮಗಾರಿಯು ಅರ್ಧಂಬರ್ಧ ನಿಂತುಹೋಗಿತ್ತು. ಇದಕ್ಕಾಗಿ ಧರಣಿ ಕುಳಿತು 2023ರ ಆರಂಭದಲ್ಲಿ ಅನುಮೋದನೆ ಕೊಡಿಸಿ ಮತ್ತೆ ಕೆಲಸ ಪ್ರಾರಂಭವಾಗುವಂತೆ ಮಾಡಿದೆ. ಆದರೆ ಅಧಿಕಾರಿಗಳು ಸೂಕ್ತ ಯೋಜನೆ ಮತ್ತು ಜಾಗರೂಕತೆ ವಹಿಸದೆ ಕೆಲಸ ಮಾಡಿರುವುದೇ ಈ ಅನಾಹುತಕ್ಕೆ ಕಾರಣ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *