BBMP
Loading ...

Load Shedding

ಬೆಂಗಳೂರು: ಬಿರುಬೇಸಿಗೆಯ ಧಗೆ ಹೆಚ್ಚುತ್ತಿರುವಂತೆಯೇ ಆಗಾಗ್ಗೆ ಕೈಕೊಡುವ ವಿದ್ಯುತ್, ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ನಿತ್ಯದ ಜನ ಜೀವನವನ್ನು ಹೈರಾಣಾಗಿಸಿದೆ. ಸರ್ಕಾರ ಅಧಿಕೃತವಾಗಿ ಲೋಡ್‌ ಶೆಡ್ಡಿಂಗ್ ಪ್ರಕಟಿಸಿಲ್ಲ. ಆದರೆ, ದುರಸ್ತಿ ನೆಪದಲ್ಲಿ ನಿತ್ಯ ಜಾರಿಯಲ್ಲಿದೆ.

ಜಿಲ್ಲಾವಾರು ಮಾಹಿತಿ ಪ್ರಕಾರ, ಹಗಲಿನ ಹೊತ್ತಿನ ಜೊತೆಗೆ ರಾತ್ರಿಯ ಹೊತ್ತೂ, 4–5 ಗಂಟೆ ಅನಿಯಮಿತ ವಿದ್ಯುತ್‌ ಕಡಿತ ಆಗುತ್ತಿದೆ. ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣವಾಗಿಸಿದೆ. ಗೃಹ,ವಾಣಿಜ್ಯ ಸಂಪರ್ಕಗಳ ಸ್ಥಿತಿ ಇದಾದರೆ, ಕೃಷಿಗೆ ನೀರು ಹಾಯಿಸಲೂ ಸಮಸ್ಯೆ ಹೆಚ್ಚಿದೆ.

ಜಿಲ್ಲೆಯಾದ್ಯಂತ ದುರಸ್ತಿ,ಕಾಮಗಾರಿ ಹೆಸರಿಲ್ಲಿ ಪದೇ ಪದೆ ವಿದ್ಯುತ್ ಕಡಿತ ಆಗುತ್ತಿದೆ. ಅಧಿಕಾರಿಗಳು ದುರಸ್ತಿ ನೆಪ ಒಡ್ಡುತ್ತಿದ್ದಾರೆ ಎಂಬ ದೂರು ವ್ಯಾಪಕವಾಗಿದೆ.

‘ಪದೇ ಪದೇ ವಿದ್ಯುತ್‌ ಕಡಿತ ಆಗುತ್ತಿದೆ. ಬೇಸಿಗೆ ಧಗೆ ಹೆಚ್ಚಿದೆ. ಕುಡಿಯುವ ನೀರು ಹಾಗೂ ಕೃಷಿಗೆ ಗುಣಮಟ್ಟದ ವಿದ್ಯುತ್ ನೀಡಬೇಕು. ಪರೀಕ್ಷೆಗಳಿರುವ ಕಾರಣ ರಾತ್ರಿ ವೇಳೆ ವಿದ್ಯುತ್‌ ಕಡಿತ ಮಾಡಬಾರದು’ ಎಂದು ರೈತ ಸಂಘದ ಮುಖಂಡರು ಆಗ್ರಹಪಡಿಸಿದ್ದಾರೆ.

ಜಿಲ್ಲೆಯ ಕೆಲವೆಡೆ ಕೃಷಿಗೆ 5 ಗಂಟೆಯಷ್ಟೇ ವಿದ್ಯುತ್ ಸಿಗುತ್ತಿದೆ. ಜಗಳೂರು ತಾಲ್ಲೂಕಿನಲ್ಲಿ ವೋಲ್ಟೆಜ್‌ ಸಮಸ್ಯೆ ಇದೆ. ಬೆಳೆ ಒಣಗುತ್ತಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ರಾತ್ರಿ 6 ಗಂಟೆಯಿಂದ ಬೆಳಿಗ್ಗೆ 9 ಗಂಟೆವರೆಗೆ ತ್ರಿ–ಫೇಸ್‌ ವಿದ್ಯುತ್‌ ಸರಬರಾಜು ವೇಳೆ ತೋಟದ ಮನೆಗಳಿಗೆ ವಿದ್ಯುತ್‌ ಸ್ಥಗಿತಗೊಳ್ಳುತ್ತಿದೆ. ಮೆಸ್ಕಾಂ ವ್ಯಾಪ್ತಿಯ ಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯುತ್‌ ಸಮಸ್ಯೆ ಸದ್ಯ ಬಾಧಿಸುತ್ತಿಲ್ಲ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ವ್ಯಾಪ್ತಿಯ ಮೈಸೂರು ಭಾಗದ ಜಿಲ್ಲೆಗಳಲ್ಲಿ ಆಗಾಗ್ಗೆ ವಿದ್ಯುತ್ ಕೈಕೊಡುತ್ತಿದ್ದು, ಅಧಿಕಾರಿಗಳಿಂದ ದುರಸ್ತಿ, ತುರ್ತು ಕಾಮಗಾರಿಯ ಸಿದ್ಧ ಉತ್ತರ ಸಿಗುತ್ತಿದೆ.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಅಧಿಕೃತ ಲೋಡ್‌ ಶೆಡ್ಡಿಂಗ್‌ ಇಲ್ಲದಿದ್ದರೂ, ‘ದುರಸ್ತಿಗಾಗಿ’ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂಬ ದೂರುಗಳು ಸಾಮಾನ್ಯವಾಗಿ ಕೇಳಿಬರುತ್ತಿವೆ.

‘ವಿದ್ಯುತ್‌ ಪೂರೈಕೆಯಲ್ಲಿ ಅಭಾವ ಆಗಿಲ್ಲ. ತ್ರೈಮಾಸಿಕ ನಿರ್ವಹಣೆ, ದೂರು ಬಂದಲ್ಲಿ ದುರಸ್ತಿ ನಡೆಯುತ್ತಿದೆ. ಹೀಗಾಗಿ ವ್ಯತ್ಯಯ ಆಗಿರಬಹುದು’ ಎಂದು ಸೆಸ್ಕ್ ನಿಗಮದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು ತಿಳಿಸಿದರು.

ಹೆಸ್ಕಾಂ: ದುರಸ್ತಿ ನೆಪ, ವಿದ್ಯುತ್ ಕಡಿತ ನಿರಂತರ
ಹುಬ್ಬಳ್ಳಿ: ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ನಿರಂತರವಾಗಿ ವಿದ್ಯುತ್ ಕಡಿತ ಆಗುತ್ತಿದೆ. ಪಟ್ಟಣ, ಗ್ರಾಮೀಣ ಭಾಗದಲ್ಲಿ ಪ್ರತಿದಿನ ವಿದ್ಯುತ್ ಕಡಿತವಿದೆ. ಟ್ರಿಪ್‌ ಸಮಸ್ಯೆಯಿಂದ ಪಂಪ್‌ಸೆಟ್‌ಗಳು ಹಾಳಾಗುತ್ತಿವೆ. ಬೆಳೆಗಳು ಒಣಗಿ ಹೋಗುತ್ತಿವೆ ಎಂಬ ದೂರುಗಳಿವೆ.

ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ವ್ಯಾಪ್ತಿಯಲ್ಲಿ ಇದೇ ಸ್ಥಿತಿಯಿದೆ. ‘ತಾಂತ್ರಿಕ ಕಾರಣಗಳಿಗಾಗಿ, ರಿಪೇರಿ ದುರಸ್ತಿಗಾಗಿ ಮಾತ್ರ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ’ ಎನ್ನುವುದು ಅಧಿಕಾರಿಗಳ ಸಿದ್ಧ ಉತ್ತರ.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಕಡಿತಕ್ಕೆ ಅಧಿಕಾರಿಗಳು ಜಂಗಲ್‌ ಕಟಿಂಗ್ ನೆಪ ಹೇಳಿದರೆ, ಹಾವೇರಿ ಜಿಲ್ಲೆಯಲ್ಲಿ ತಾಂತ್ರಿಕ ನಿರ್ವಹಣೆ ಕಾಮಗಾರಿ ಹಾಗೂ ಹಳೇ ಕಂಬ–ತಂತಿಗಳ ಬದಲಾವಣೆ ಕೆಲಸ ನಡೆಯುತ್ತಿದೆ ಎಂಬ ಸಬೂಬು ಹೇಳುತ್ತಾರೆ.

ಜೆಸ್ಕಾಂ: ಗ್ರಾಮೀಣ ವ್ಯಾಪ್ತಿಯಲ್ಲಿ ವ್ಯತ್ಯಯ
ಕಲಬುರಗಿ: ಜೆಸ್ಕಾಂ ವ್ಯಾಪ್ತಿಯಲ್ಲಿ ಬಹುತೇಕ ಸಮಸ್ಯೆಯಿಲ್ಲ. ಈ ವ್ಯಾಪ್ತಿಯ ಕೆಲ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಅಲ್ಪಾವಧಿಗೆ ವಿದ್ಯುತ್‌ ಸ್ಥಗಿತಗೊಳಿಸಲಾಗುತ್ತಿದೆ. ಜೊತೆಗೆ ಕೃಷಿ ಪಂಪ್‌ಸೆಟ್‌ಗಳಿಗೆ ವೋಲ್ಟೇಜ್‌ ಸಮಸ್ಯೆ ಕಾಡುತ್ತಿದೆ ಎಂಬ ಆರೋಪಗಳಿವೆ. ವಿದ್ಯುತ್‌ ಕಡಿತ ಕುರಿತು ಪೂರ್ವಭಾವಿಯಾಗಿ ಮಾಹಿತಿ ನೀಡುತ್ತಿಲ್ಲ. ಏಕಾ‌ಏಕಿ ಕಡಿತ ಮಾಡುತ್ತಾರೆ. ಕೇಳಿದರೆ ದುರಸ್ತಿ ಎನ್ನುತ್ತಾರೆ ಎಂಬುದು ನಾಗರಿಕರ ದೂರು. ಯಾದಗಿರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅನಿಯಮಿತ ವಿದ್ಯುತ್ ಕಡಿತ ಆಗುತ್ತಿದೆ. ಕಲಬುರಗಿ, ಬೀದರ್‌, ಕೊಪ್ಪಳ ಜಿಲ್ಲೆಗಳಲ್ಲಿ ಪ್ರಸ್ತುತ ಸಮಸ್ಯೆಯಿಲ್ಲ.

ಮೆಸ್ಕಾಂ– ಹಳ್ಳಿಗಳಲ್ಲಿ ಪೂರೈಕೆ ಸಮಸ್ಯೆ
ಮಂಗಳೂರು: ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ವೋಲ್ಟೇಜ್ ಸಮಸ್ಯೆಯೂ ಇದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ವಿದ್ಯುತ್ ಕಡಿತ ಕಡಿಮೆ ಇದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ಕೈಗಾರಿಕೆಗೆ ಹಾಗೂ ಗೃಹಬಳಕೆ ವಿದ್ಯುತ್‌ ಪೂರೈಕೆಯಲ್ಲಿ ಅನಿಯಮಿತ ಲೋಡ್‌ಶೆಡ್ಡಿಂಗ್ ಇಲ್ಲ. ಕೆಲವೆಡೆ ಕಡೆ ಉಪಕರಣಗಳು ಕೆಟ್ಟಿದ್ದರಿಂದ ಪೂರೈಕೆ ವ್ಯತ್ಯಯವಾಗಿತ್ತು. ಅದನ್ನು ಹೊರತುಪಡಿಸಿ ಯಾವುದೇ ಸಮಸ್ಯೆ ಇಲ್ಲ’ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.

ಭಾರತದ ಶ್ರೀಮಂತ ಶಾಸಕರ ಪಟ್ಟಿ ರಿಲೀಸ್ : ಡಿ.ಕೆ.ಶಿವಕುಮಾರ್ ನಂ.2, ಮುಂಬೈ ಬಿಜೆಪಿ ಶಾಸಕ ನಂ.1!

Leave a Reply

Your email address will not be published. Required fields are marked *