Greater Bengaluru News9 : ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಬುಧವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು, ದಕ್ಷಿಣ ಬೆಂಗಳೂರಿನ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿತು.
ವಿಜಯನಗರ, ಜಯನಗರ, ಪದ್ಮನಾಭನಗರ, ಜೆ.ಪಿ.ನಗರ, ಎಡೆಯೂರು, ಬಸವನಗುಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಭಾರಿ ಮಳೆಯಾಗಿದೆ. ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಾರ್ವಜನಿಕರು ಮಳೆಯಿಂದಾಗಿ ಪರದಾಡುವಂತಾಯಿತು. ಹಲವು ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.
ದಾವಣಗೆರೆಯಲ್ಲೂ ಭರ್ಜರಿ ಮಳೆ
ದಾವಣಗೆರೆಯಲ್ಲಿಯೂ ಬುಧವಾರ ಸಂಜೆ ಏಕಾಏಕಿ ಭಾರಿ ಮಳೆ ಸುರಿಯಿತು. ಗಾಳಿ ಸಹಿತ ಮಳೆಯಾಗಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು. ಕೆಲವೆಡೆ ವಿದ್ಯುತ್ ಸಂಪರ್ಕದಲ್ಲೂ ವ್ಯತ್ಯಯ ಉಂಟಾಯಿತು.
ಮುಂದಿನ 6 ದಿನ ಮಳೆ ಸಾಧ್ಯತೆ
ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಮುಂದಿನ 6 ದಿನಗಳ ಕಾಲ ಕರ್ನಾಟಕದ ವಿವಿಧೆಡೆ ಜೋರಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಒಳನಾಡು ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಬಿಸಿಲಿನ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಮೋಡ ಕವಿದ ವಾತಾವರಣ ಹಾಗೂ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಉಡುಪಿಯಲ್ಲಿ 107.5 ಮಿ.ಮೀ. ಮಳೆ
ಆಗಸ್ಟ್ 18ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಂಜಾಲುವಿನಲ್ಲಿ ರಾಜ್ಯದಲ್ಲೇ ಗರಿಷ್ಠ 107.5 ಮಿ.ಮೀ. ಮಳೆಯಾಗಿದೆ.
ಪುತ್ತೂರು ತಾಲೂಕಿನ ಬೆಳಂದೂರಿನಲ್ಲಿ 89.5 ಮಿ.ಮೀ., ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಾರವಾಡದಲ್ಲಿ 63.5 ಮಿ.ಮೀ., ತೀರ್ಥಹಳ್ಳಿಯ ಆಗುಂಬೆಯಲ್ಲಿ 53 ಮಿ.ಮೀ., ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಲೆಯಲ್ಲಿ 43 ಮಿ.ಮೀ., ಮಡಿಕೇರಿಯ ಚೆಂಬುವಿನಲ್ಲಿ 39 ಮಿ.ಮೀ. ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ 37 ಮಿ.ಮೀ. ಮಳೆಯಾಗಿದೆ.


