BBMP
Loading ...

DKS

Greater Bengaluru News9 : ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಒಪ್ಪಂದ ನಡೆದಿದೆ. ನಾವಿಬ್ಬರೂ ಮಾತನಾಡಿಕೊಂಡಿದ್ದು, ಅದರಂತೆ ನಡೆದುಕೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದ ಜಗದೀಶ್ವರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಯಾವತ್ತೂ ಐದು ವರ್ಷ ಮುಖ್ಯಮಂತ್ರಿ ಸ್ಥಾನದಲ್ಲಿ ಇರಲ್ಲ ಎಂದು ಹೇಳಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರ. ಹೈಕಮಾಂಡ್ ಸಿಎಂ ಪರವಾಗಿ ಇದ್ದದ್ದರಿಂದಲೇ ಅವರು ಮುಖ್ಯಮಂತ್ರಿ ಆಗಿದ್ದಾರೆ” ಎಂದು ಹೇಳಿದರು.

ಐದು ವರ್ಷಗಳ ಹಿಂದೆ ಇದೇ ದೇವಾಲಯಕ್ಕೆ ಕುಟುಂಬದ ವಿಚಾರವಾಗಿ ಪ್ರಾರ್ಥನೆ ಮಾಡಿದ್ದೆ. ಅದು ಈಡೇರಿದ ಕಾರಣ ಮತ್ತೆ ಇಲ್ಲಿಗೆ ಬರುವೆ ಎಂದು ಹೇಳಿದ್ದೆ. ಈಗ ಮತ್ತೆ ದೇವಿಯ ಆಶೀರ್ವಾದ ಕೋರಿದ್ದೇನೆ ಎಂದು ಡಿಕೆಶಿ ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ, “ಅದು ಎಲ್ಲವೂ ನಿಮ್ಮಲ್ಲಿ ಚರ್ಚೆಯಾಗುತ್ತಿದೆ” ಎಂದು ಮುಗುಳುನಗುತ್ತಾ ಪ್ರತಿಕ್ರಿಯಿಸಿ ಅವರು ಸ್ಥಳ ತೊರೆದರು.

ಇತ್ತೀಚೆಗಷ್ಟೇ ವಿಧಾನಸಭಾ ಅಧಿವೇಶನದ ಕೊನೆಯ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, “ಎರಡೂವರೆ ವರ್ಷ ಮಾತ್ರ ಸಿಎಂ ಎಂಬ ಯಾವುದೇ ತೀರ್ಮಾನವಾಗಿಲ್ಲ. ಈಗ ನಾನೇ ಮುಖ್ಯಮಂತ್ರಿ, ಮುಂದೆಯೂ ನಾನೇ ಇರುತ್ತೇನೆ. ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ” ಎಂದು ಸ್ಪಷ್ಟ ಹೇಳಿಕೆ ನೀಡಿ ‘ಫುಲ್ ಟರ್ಮ್ ಸಿಎಂ’ ಅಸ್ತ್ರ ಪ್ರಯೋಗಿಸಿದ್ದರು.

ಈ ಹೇಳಿಕೆಯ ಬೆನ್ನಲ್ಲೇ ಡಿಕೆ ಶಿವಕುಮಾರ್ “ಒಪ್ಪಂದ ನಡೆದಿದೆ” ಎಂದು ಬಹಿರಂಗವಾಗಿ ಹೇಳಿರುವುದು ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಇದುವರೆಗೆ ಸ್ಪಷ್ಟ ಉತ್ತರ ತಪ್ಪಿಸಿಕೊಂಡಿದ್ದ ಕುರ್ಚಿ ಕಿತ್ತಾಟಕ್ಕೆ ಹೊಸ ಟ್ವಿಸ್ಟ್ ನೀಡಿದೆ.

Leave a Reply

Your email address will not be published. Required fields are marked *