ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಉಪ ನೋಂದಣಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಕರೆ ಕೊಟ್ಟಿದ್ದ ಅನಿರ್ದಿಷ್ಟಾವದಿ ಮುಷ್ಕರವನ್ನು ಮುಂದೂಡಲಾಗಿದೆ.
ಫೆಬ್ರವರಿ 27ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವದಿ ಮುಷ್ಕರ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ಮುಂದೂಡಲಾಗಿದೆ.
ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರ ಸಂಘದಿಂದ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಆಸ್ತಿ ದಸ್ತಾವೇಜು ನೋಂದಣಿ ಸೇರಿ ಎಲ್ಲಾ ಸೇವೆಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ನಿರ್ಧಾರ ಮಾಡಲಾಗಿತ್ತು. ಆದರೆ, ಮುಷ್ಕರ ಮುಂದೂಡಿರುವುದರಿಂದ ಎಂದಿನಂತೆ ಎಲ್ಲ ಸೇವೆಗಳು ಇರಲಿವೆ.
ಕಂದಾಯ ಸಚಿವ ಕೃಷ್ಣಬೈರೇಗೌಡ, ಸರ್ಕಾರದ ಮುಖ್ಯಕಾರ್ಯದರ್ಶಿ & ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು, ಫೆಬ್ರವರಿ 27ರಿಂದ ಮುಷ್ಕರ ನೀಡುವುದಾಗಿ ಎಚ್ಚರಿಸಲಾಗಿತ್ತು. ಇದೀಗ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಶೀಘ್ರದಲ್ಲಿ ಬೇಡಿಕೆ ಈಡೇರದಿದ್ದರೆ, ಮತ್ತೆ ಮುಷ್ಕರಕ್ಕೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಲಾಗಿದೆ.
ನೌಕರ ಸಂಘದ ಬೇಡಿಕೆಗಳೇನು?
– ಕಾವೇರಿ-2 ತಂತ್ರಾಂಶದಲ್ಲಿನ ಸಮಸ್ಯೆಗಳು
– ಫೇಸ್ಲೆಸ್ ರಿಜಿಸ್ಟ್ರೇಷನ್, ಇಸಿ, ಸಿಸಿ ವಿತರಿಸಲು ಉಂಟಾಗುತ್ತಿರುವ ಸರ್ವರ್ ಸಮಸ್ಯೆ
– ಐಟಿ ಅಧಿಕಾರಿಗಳು ಮಾಹಿತಿ ಹೆಸರಿನಲ್ಲಿ ಉಪ ನೋಂದಣಾಧಿಕಾರಿಗಳಿಗೆ ನೀಡುತ್ತಿರುವ ಕಿರುಕುಳ
– ಉಪ ನೋಂದಣಾಧಿಕಾರಿಗಳ ವರ್ಗಾವಣೆಗಳೂ ಪ್ರತ್ಯೇಕ ನಿಯಮಗಳನ್ನು ರೂಪಿಸಬೇಕು
– ಕರ್ನಾಟಕ ನೊಂದಾಣೆ ಕಾಯ್ದೆಗೆ 22 ಬಿ ಕಲಂ ಸೇರಿಸಿರೋದರ ವಿರುದ್ಧವು ಹೋರಾಟ




