BBMP
Loading ...

DKS

Greater Bengaluru News9: ಬೆಂಗಳೂರಿನಲ್ಲಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರವು’ ತನ್ನ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಹಲವಾರು ಕಟ್ಟಡ ನಿರ್ಮಾಣದಾರರ ಸಂಕಷ್ಟ ಪರಿಹರಿಸಲು ಮುಂದಾಗಿದೆ. ಕಟ್ಟಡ ನಿರ್ಮಾಣಗಳಲ್ಲಿನ ಉಲ್ಲಂಘನೆ ಮಿತಿಯನ್ನು ಹಾಲಿ ಶೇಕಡಾ 5 ರಿಂದ ಶೇಕಡಾ 15 ಕ್ಕೆ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಜಿಬಿಎ ಕಟ್ಟಡ ಉಪವಿಧಿಗಳ ತಿದ್ದುಪಡಿಗಾಗಿ ಕರಡು ಅಧಿಸೂಚನೆ ಪ್ರಕಟಿಸಿದೆ. ಈ ಮೂಲಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ ನೀಡಿದೆ.

ಈ ನಿರ್ಧಾರದಿಂದ ಸುಮಾರು 03 ಲಕ್ಷಕ್ಕೂ ಹೆಚ್ಚು ಕಟ್ಟಡ ಮಾಲೀಕರಿಗೆ ಅನುಕೂಲವಾಗಲಿದೆ. ಕಟ್ಟಡ ಮಾಲೀಕರ ಸಮಸ್ಯೆಗಳನ್ನು ಅರಿತ ಸರ್ಕಾರ ಕಟ್ಟಡ ಉಪವಿಧಿಗಳು 2003 ರ ಉಪವಿಧಿ 6ಕ್ಕೆ ತಿದ್ದುಪಡಿ ತಂದಿದೆ. ಕಟ್ಟಡಗಳ ಉಲ್ಲಂಘನೆ ಮಿತಿ ಶೇ.15ರ ವರೆಗೆ ವಿಸ್ತರಿಸಲಾಗಿದೆ. ಇದರಿಂದ ಶೇ.5ಕ್ಕಿಂತ ಹೆಚ್ಚಿನ ಪ್ರಮಾಣದ ಉಲ್ಲಂಘನೆ ಇರುವ ಆಸ್ತಿ ಮಾಲೀಕರು ದಂಡ ಪಾವತಿಸಿಕೊಂಡು ಕ್ರಮಬದ್ಧಗೊಳಿಸಲು ಸರ್ಕಾರ ಅವಕಾಶ ನೀಡಿದೆ. ಈ ನಿಯಮ ಎಲ್ಲ ಐದು ನಗರ ಪಾಲಿಕೆಗಳಿಗೆ ಅನ್ವಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಇದೇ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎಕ್ಸ್‌ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಕಟ್ಟಡ ಸಕ್ರಮಗೊಳಿಸಲು ಸುವರ್ಣಾವಕಾಶ’ ನೀಡಲಾಗಿದೆ. ಈ ಮೂಲಕ ಸರ್ಕಾರ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ ಎಂದು ಅವರು ಅಧಿಕೃವಾಗಿ ಘೋಷಿಸಿದ್ದಾರೆ.

ಕಟ್ಟಡ ಮಾಲೀಕರಿಗೆ ಏನೆಲ್ಲ ಪ್ರಯೋಜನ ಸಿಗಲಿದೆ?

  • ಪಾಲಿಕೆಗಳಿಂದ ಮಂಜೂರಾದ ಶೇ.15ರವರೆಗೆ ವ್ಯತ್ಯಾಸವಿದ್ದಲ್ಲಿ ಈಗ ನಿಗದಿತ ಮಿತಿಯೋಳಗೆ ಅವುಗಳನ್ನು ಕ್ರಮಬದ್ಧ (ಸಕ್ರಮ) ಮಾಡಿಕೊಳ್ಳಬಹುದಾಗಿದೆ.
  • ಕ್ರಮಬದ್ಧಗೊಳಿಸುವಿಕೆಯ ನಂತರ ಸಾವಿರಾರು ಮನೆಮಾಲೀಕರು ತಮ್ಮ ಕಟ್ಟಡಗಳಿಗೆ ಸದರಿ ಸ್ವಾಧೀನ ಪ್ರಮಾಣಪತ್ರ (Occupancy Certificate) ಇದು ಸಹಕಾರಿ ಆಗುತ್ತದೆ.
  • ಕಟ್ಟಡದ ಸೆಟ್‌ಬ್ಯಾಕ್, ಪ್ಲಾಟ್ ಕವರೇಜ್ ಮತ್ತು ಫ್ಲೋರ್ ಏರಿಯಾ ರೇಶಿಯೋ (FAR) ನಲ್ಲಿನ ಬದಲಾವಣೆಗಳಿಗೆ ಈ ನಿರ್ಧಾರವು ಅನ್ವಯವಾಗಲಿದೆ.
  • ನಕ್ಷೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರುವ ಕಟ್ಟಡಗಳಿಗೆ ಈಗ ಕಾನೂನುಬದ್ಧ ಮಾನ್ಯತೆ ಪಡೆಯಲು ಸ್ಪಷ್ಟ ಮಾರ್ಗ ಸಿಕ್ಕಂತಾಗಿದೆ. ಈ ಎಲ್ಲ ಸಮಸ್ಯೆಗಳಿಂದ ಕಟ್ಟಡ ಮಾಲೀಕರು ಒಂದಷ್ಟು ಸಮಸ್ಯೆ ಎದುರಿಸುತ್ತಿದ್ದರು. ಆ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಉಪವಿಧಿಗೆ ತಿದ್ದುಪಡಿ ತಂದಿದೆ ಅವರು ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸಿ ನಿರ್ಮಾಣವಾಗಿರುವ ಹಲವಾರು ಕಟ್ಟಡಗಳಿಗೆ ನಗರ ಪಾಲಿಕೆಗಳಿಂದ ಸ್ವಾಧೀನಾನುಭವ ಪ್ರಮಾಣ ಪತ್ರ ನೀಡುವುದಿಲ್ಲ. ಅಂತ ಕಟ್ಟಡಗಳಿಗೆ ಬೆಂಗಳೂರು ಜಲಮಂಡಳಿಯಿಂದ ಕಾವೇರಿ ನೀರು ಸರಬರಾಜು ಪಡೆಯುವುದು, ಬೆಸ್ಕಾಂ ನಿಂದ ವಿದ್ಯುತ್‌ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಸದರಿ ತಿದ್ದುಪಡಿಯಿಂದ ಈ ಸಂಕಷ್ಟಗಳೆಲ್ಲ ದೂರವಾಗಲಿವೆ ಎಂದು ಇತ್ತೀಚೆಗೆ ಜಿಬಿಎ ಆಯುಕ್ತರು ತಿಳಿಸಿದ್ದರು.

ಅಧಿಸೂಚನೆ: ಆಕ್ಷೇಪಣೆಗೆ ಆಹ್ವಾನಿಸಿದ ಜಿಬಿಎ

ಸದ್ಯ ಕಟ್ಟಡ ನಿಯಮ ಉಲ್ಲಂಘನೆ ಪ್ರಮಾಣ ಶೇ.15ರವರೆಗೆ ಏರಿಕೆ ಮಾಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ಒಂದು ತಿಂಗಳೊಳಗೆ (ಏಪ್ರಿಲ್ 30) ನಾಗರಿಕರ ಆಕ್ಷೇಪಣೆಗಳು, ಸಲಹೆಗಳು ಇದ್ದಲ್ಲಿ ನಿಮ್ಮ ಹತ್ತಿರದ ಐದು ನಗರ ಪಾಲಿಕೆಗಳಲ್ಲಿ ಸಲ್ಲಿಸಬಹುದು.

ಸಾರ್ವಜನಿಕರು ಸಲಹೆ, ಆಕ್ಷೇಪನೆ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕೃತ ಜಾಲತಾಣ https://updates.bbmpgov.in/public ಗೆ ಭೇಟಿ ನೀಡಿ ವೀಕ್ಷಿಸಬಹುದು. ಬಳಿಕ ಸಲಹೆ, ಸೂಚನೆ ನೀಡುವಂತೆ ಜಿಬಿಎ ಕೋರಿದೆ.

Leave a Reply

Your email address will not be published. Required fields are marked *