BBMP
Loading ...

HDD Wife Chennamma

Greatger Bengaluru News9 : ಪತ್ನಿ ಚೆನ್ನಮ್ಮ ಅವರ ನಿಧನದ ಬಳಿಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ತಮ್ಮ 72 ವರ್ಷಗಳ ದಾಂಪತ್ಯ ಜೀವನವನ್ನು ಸ್ಮರಿಸಿಕೊಂಡಿರುವ ಅವರು, ಚೆನ್ನಮ್ಮ ಅವರು ತಮ್ಮ ಬದುಕಿನ ಶಕ್ತಿ, ತ್ಯಾಗ ಮತ್ತು ಪ್ರೇರಣೆಯ ಪ್ರತಿರೂಪವಾಗಿದ್ದರು ಎಂದು ಭಾವುಕರಾಗಿ ಬರೆದಿದ್ದಾರೆ.

ಜುಲೈ 18, 2026ರಂದು ಚೆನ್ನಮ್ಮ ಅವರು ಶಿವೈಕ್ಯರಾದ ಬಳಿಕ ತಮ್ಮ ಕುಟುಂಬದ ದುಃಖದಲ್ಲಿ ಭಾಗಿಯಾಗಿ ಸಾಂತ್ವನ ಸೂಚಿಸಿದ ಎಲ್ಲರಿಗೂ ದೇವೇಗೌಡರು ಕೃತಜ್ಞತೆ ಸಲ್ಲಿಸಿದ್ದಾರೆ.

“72 ವರ್ಷಗಳ ಕಾಲ ಹೆಜ್ಜೆ ಹೆಜ್ಜೆಗೂ ನನ್ನೊಂದಿಗೆ ಸಾಗಿದ ಸಹಧರ್ಮಿಣಿ ಚೆನ್ನಮ್ಮ ಅವರು ನಮ್ಮ ಮನೆಯ ನಂದಾದೀಪವಾಗಿದ್ದರು. ಅವರು ಅಗಲಿದ ಈ ಕಷ್ಟದ ಸಮಯದಲ್ಲಿ ನಮ್ಮ ದುಃಖದಲ್ಲಿ ಭಾಗಿಯಾಗಿ ಸಾಂತ್ವನ ಹೇಳಿದ ಪ್ರತಿಯೊಬ್ಬರಿಗೂ ಕೈಮುಗಿದು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.

ತಮ್ಮ ರಾಜಕೀಯ ಜೀವನದ ಪ್ರತಿಯೊಂದು ಹಂತದಲ್ಲೂ ಚೆನ್ನಮ್ಮ ಅವರ ಬೆಂಬಲವೇ ತಮ್ಮ ಶಕ್ತಿಯಾಗಿತ್ತು ಎಂದು ದೇವೇಗೌಡರು ನೆನಪಿಸಿಕೊಂಡಿದ್ದಾರೆ. “ಶಾಸಕನಾಗಿ, ಪ್ರತಿಪಕ್ಷ ನಾಯಕನಾಗಿ, ಸಚಿವನಾಗಿ, ಮುಖ್ಯಮಂತ್ರಿಯಾಗಿ ಮತ್ತು ಕೊನೆಗೆ ಪ್ರಧಾನಮಂತ್ರಿಯಾಗಿ ದೇಶಸೇವೆ ಮಾಡುವ ಅವಕಾಶ ನನಗೆ ದೊರೆಯಿತು.

ಕೀರ್ತಿ ಮತ್ತು ಗೌರವ ನನಗೆ ಸಿಕ್ಕಿದ್ದರೂ, ಅದರ ಹಿಂದಿನ ನಿಜವಾದ ಚೈತನ್ಯಶಕ್ತಿ ಚೆನ್ನಮ್ಮ ಅವರೇ. ಗಂಧದ ಮರ ತನ್ನನ್ನು ತಾನು ಸವೆಸಿಕೊಂಡು ಪರಿಮಳ ನೀಡುವಂತೆ ಅವರ ತ್ಯಾಗ ಮತ್ತು ಮಮತೆ ನನ್ನ ಬದುಕಿಗೆ ಪರಿಪೂರ್ಣತೆ ನೀಡಿತು” ಎಂದು ಹೇಳಿದ್ದಾರೆ.

ರಾಜಕೀಯ ಹಿನ್ನೆಲೆಯಿಲ್ಲದ ಕುಟುಂಬದ ಸೊಸೆಯಾಗಿ ಬಂದ ಚೆನ್ನಮ್ಮ ಅವರು ತಮ್ಮ ದೈವಭಕ್ತಿ, ಸರಳತೆ ಹಾಗೂ ಸಾಂಪ್ರದಾಯಿಕ ಜೀವನಶೈಲಿಯಿಂದ ಕುಟುಂಬವನ್ನು ಬೆಳೆಸಿದರು ಎಂದು ಅವರು ಸ್ಮರಿಸಿದ್ದಾರೆ. “ಅವರು ಮನೆಯ ಅನ್ನಪೂರ್ಣೆಯಾಗಿದ್ದರು.

ಮಾನವೀಯ ಮೌಲ್ಯಗಳು, ಮಾತೃವಾತ್ಸಲ್ಯ ಮತ್ತು ಕರುಣೆಯಿಂದ ಎಲ್ಲರ ಪ್ರೀತಿಯ ಅಮ್ಮನಾದರು. ಮಾಜಿ ಪ್ರಧಾನಿಯ ಪತ್ನಿಯಾಗಿದ್ದರೂ ಜೀವನದ ಕೊನೆಯ ಕ್ಷಣದವರೆಗೂ ಅತ್ಯಂತ ಸರಳ ಮಹಿಳೆಯಾಗಿ ಬದುಕಿದರು. ರಾಜಕೀಯದ ಪ್ರಭಾವ ತಮ್ಮ ವ್ಯಕ್ತಿತ್ವಕ್ಕೆ ತಾಗದಂತೆ ಬದುಕಿದ ಅಪರೂಪದ ವ್ಯಕ್ತಿಯಾಗಿದ್ದರು” ಎಂದು ದೇವೇಗೌಡರು ಬಣ್ಣಿಸಿದ್ದಾರೆ.

ಚೆನ್ನಮ್ಮ ಅವರ ಅಂತಿಮ ದರ್ಶನದಿಂದ ಹಿಡಿದು ಅಂತ್ಯಕ್ರಿಯೆಯವರೆಗೆ ಗೌರವ ಸಲ್ಲಿಸಿದ ಜನತೆಗೆ ದೇವೇಗೌಡರು ವಿಶೇಷ ಧನ್ಯವಾದ ತಿಳಿಸಿದ್ದಾರೆ. “ನನ್ನ ಮನೆಯನ್ನು ಬೆಳಗಿದ ಚೆನ್ನಮ್ಮ ಅವರು ಶಿವನ ಪಾದ ಸೇರಿರುವ ಈ ಸಂದರ್ಭದಲ್ಲಿ ರಾಜ್ಯದ ಜನರು ತೋರಿದ ಆತ್ಮೀಯತೆ, ಪ್ರೀತಿ ಮತ್ತು ಗೌರವಕ್ಕೆ ನಾನು ಸದಾ ಋಣಿಯಾಗಿದ್ದೇನೆ. ಅವರ ಆತ್ಮಶಾಂತಿಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆಗಳು” ಎಂದು ಹೇಳಿದ್ದಾರೆ.

ರಾಜ್ಯದ ಮುಖ್ಯಮಂತ್ರಿ, ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಮಠಾಧೀಶರು, ಸಚಿವರು, ಶಾಸಕರು, ಮಾಜಿ ಶಾಸಕರು, ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಕಲೆ, ಸಾಹಿತ್ಯ ಹಾಗೂ ಚಿತ್ರರಂಗದ ಗಣ್ಯರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಸಾಂತ್ವನ ಸೂಚಿಸಿದ ಎಲ್ಲರಿಗೂ ದೇವೇಗೌಡರು ಕೃತಜ್ಞತೆ ಸಲ್ಲಿಸಿದ್ದಾರೆ.

“ಹಾಸನ ಜಿಲ್ಲೆಯ ಜನರು ನನ್ನ ಅರ್ಧಾಂಗಿ ಚೆನ್ನಮ್ಮ ಅವರ ಬಗ್ಗೆ ತೋರಿದ ಅಭಿಮಾನ, ಪ್ರೀತಿ ಮತ್ತು ವಾತ್ಸಲ್ಯಕ್ಕೆ ನಾನು ಮೂಕನಾಗಿದ್ದೇನೆ. ‘ಧನ್ಯವಾದ’ ಎಂಬ ಒಂದು ಪದ ಸಾಕಾಗುವುದಿಲ್ಲ. ಎಲ್ಲರಿಗೂ ವಿನಮ್ರವಾಗಿ ತಲೆಬಾಗುತ್ತೇನೆ” ಎಂದು ತಮ್ಮ ಭಾವುಕ ಸಂದೇಶದಲ್ಲಿ ದೇವೇಗೌಡರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *