BBMP
Loading ...

Siddaramaiah

Greater Bengaluru News9
: ಧಾರವಾಡದ ಎಎಸ್‌ಪಿ ಆಗಿದ್ದ ನಾರಾಯಣ.ವಿ.ಭರಮನಿ ಅವರ ಮೇಲೆ ಕೈಎತ್ತಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಬೆಳಗಾವಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ನಾರಾಯಣ ಅವರಿಗೆ ಸಾರ್ವಜನಿಕವಾಗಿ ಸಿಎಂ ಕೈಎತ್ತಿದ್ದು, ಈ ಸಂಬಂಧ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲು ಕೋರಿ ಭೀಮಪ್ಪ ಗಡಾದ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ವಜಾ ಮಾಡಿದೆ.

ಕೆಲ ತಿಂಗಳುಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪು ಬಟ್ಟೆ ಪ್ರದರ್ಶನಕ್ಕೆ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ, ವೇದಿಕೆ ಮೇಲೆಯೇ ಧಾರವಾಡ ಎಎಸ್‌ಪಿ ನಾರಾಯಣ.ವಿ.ಭರಮನಿ ಅವರ ಮೇಲೆ ಕೈ ಎತ್ತಿದ್ದರು. ಅವರನ್ನು ಹೇಗೆ ಒಳಗೆ ಬಿಟ್ಟಿದ್ದೀರಿ ಎಂದು ವೇದಿಕೆ ಮೇಲೆಯೇ ಎಎಸ್‌ಪಿ ನಾರಾಯಣ ಅವರನ್ನು ಕರೆದು ಹೊಡೆಯಲು ಕೈ ಎತ್ತಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇನ್ನು ಈ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲು ಕೋರಿ ಭೀಮಪ್ಪ ಗಡಾದ ಎನ್ನುವರು ಕೋರ್ಟ್​​​ಗೆ ಖಾಸಗಿ ದೂರು ಸಲ್ಲಿಸಿದ್ದು, ಇದನ್ನು ಇಂದು (ಡಿಸೆಂಬರ್ 10) ಪರಿಶೀಲನೆ ಮಾಡಿದ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಜಡ್ಜ್ ಕೆ.ಎನ್.ಶಿವಕುಮಾರ್ ಅವರು ಭೀಮಪ್ಪ ಗಡಾದ ಸಲ್ಲಿಸಿದ್ದ ಖಾಸಗಿ ದೂರು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೆ ಗುರಿಯಾಗಿ ಮನನೊಂದಿದ್ದ ನಾರಾಯಣ ಭರಮನಿ ಅವರು ಸ್ವಯಂ ನಿವೃತ್ತಿಗೆ ಮುಂದಾಗಿದ್ದರು. ನಾರಾಯಣ ಭರಮನಿ ಅವರ ಭಾವುಕ ಬಹಿರಂಗ ಪತ್ರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ನೊಂದ ಅಧಿಕಾರಿ ಪರವಾಗಿ ಈಗ ಭಾರೀ ಜನಬೆಂಬಲ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಎಚ್ಚೆತ್ತ ಸಿದ್ದರಾಮ್ಯಯನವರು ತಮ್ಮ ಆಪ್ತರ ಮೂಲಕ ನಾರಾಯಣ ಭರಮನಿ ಅವರನ್ನು ಮನವೊಲಿಸಿದ್ದರು.

ಮುಂಬಡ್ತಿ ನೀಡಿ ಮನವೊಲಿಸಿದ ಸಿಎಂ
ಮುಜುಗರಕ್ಕೀಡಾಗಿ ಸ್ವಯಂ ನಿವೃತ್ತಿಗೆ ಪತ್ರ ಬರೆದಿದ್ದ ನಾರಾಯಣ ಬರಮನಿ ಅವರನ್ನು ಸಿಎಂ ಸಿದ್ದರಾಮಯ್ಯನವರು ತಮ್ಮ ಆಪ್ತರ ಮೂಲಕ ಮನವೊಲಿಸಿದ್ದರು. ಅಲ್ಲದೇ ಧಾರವಾಡ ಎಎಸ್ಪಿಯಾಗಿದ್ದ ನಾರಾಯಣ ಬರಮನಿ ಅವರಿಗೆ ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿ ಹುದ್ದೆ ನೀಡಲಾಗಿದೆ. ಇದರೊಂದಿಗೆ ನಾರಾಯಣ ಬರಮನಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.

ಅಂದು ಬೆಳಗಾವಿಯಲ್ಲಿ ಆಗಿದ್ದೇನು?
ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಭೆ ವೇಳೆ ಸಿಎಂ ಭಾಷಣ ಮಾಡುತ್ತಿರುವಾಗಲೇ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ, “ಏಯ್‌.. ಯಾರಿಲ್ಲಿ ಎಸ್‌ಪಿ?” ಬಾರಯ್ಯ ಇಲ್ಲಿ ಎಂದು ವೇದಿ ಮೇಲೆ ಕರೆದು ನಾರಾಯಣ ಭರಮನಿ ಅವರ ಮೇಲೆ ಕೈ ಎತ್ತಿದ್ದರು. ಸಿದ್ದರಾಮಯ್ಯ ಅವರ ಈ ವರ್ತನೆಗೆ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯನವರ ವರ್ತನೆಗೆ ಸಾಕಷ್ಟು ಟೀಕೆ ಟಿಪ್ಪಣಿಗಳು ವ್ಯಕ್ತವಾಗಿದ್ದವು. ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಯನ್ನು ಅವಮಾನಿಸುವುದು, ಅವಹೇಳನ ಮಾಡುವುದು ಸರಿಯಲ್ಲ ಟೀಕಿಸಿದ್ದರು.

Leave a Reply

Your email address will not be published. Required fields are marked *