BBMP
Loading ...

GBA

Greater Bengaluru News9: ಬಹಳ ದಿನಗಳಿಂದ ಬಾಕಿ ಉಳಿದಿರುವ ಜಿಬಿಎ (GBA) ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ಹಾಗೂ ಅಂತಿಮ ಕಾಲವಕಾಶವನ್ನು ನೀಡಿದೆ. ಡಿಸೆಂಬರ್ ಅಂತ್ಯದ ಒಳಗಾಗಿ ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಗಿಸಬೇಕು ಎಂದು ಡೆಡ್‌ಲೈನ್ ವಿಧಿಸಿರುವ ನ್ಯಾಯಪೀಠ, ಇದು ಕೊನೆಯ ಅವಕಾಶವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಬೇರೆ ಯಾವುದೇ ಕಾರಣಗಳನ್ನು ಹೇಳಿಕೊಂಡು ನ್ಯಾಯಾಲಯದ ಮುಂದೆ ಬರಬಾರದು ಎಂದು ಕಠಿಣ ಎಚ್ಚರಿಕೆಯನ್ನು ನೀಡಿದೆ.

ಈ ಪ್ರಕರಣದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ, ಸದ್ಯ ರಾಜ್ಯದಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆ ನಡೆಯುತ್ತಿರುವುದರಿಂದ ಸರ್ಕಾರದ ಬಹುತೇಕ ಎಲ್ಲ ಸಿಬ್ಬಂದಿಗಳು ಅದರಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಕಾರಣಕ್ಕೆ ರಾಜ್ಯ ಚುನಾವಣಾ ಆಯೋಗ ಕೂಡ ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ಮನವಿ ಮಾಡಿಕೊಂಡಿದ್ದು, ಜಿಬಿಎ ಚುನಾವಣೆಯನ್ನು ನಡೆಸಲು ಡಿಸೆಂಬರ್ ತಿಂಗಳವರೆಗೆ ಕಾಲಾವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಕೋರಿಕೊಂಡಿತ್ತು.

ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದ ಈ ಜಂಟಿ ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಡಿಸೆಂಬರ್ ವರೆಗೆ ಸಮಯ ನೀಡಲು ಒಪ್ಪಿಗೆ ಸೂಚಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಕೋರ್ಟ್ ನೀಡಿರುವ ಗಡುವಿನ ಪ್ರಕಾರ ಡಿಸೆಂಬರ್ ಒಳಗೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮುಂಬರುವ ಜನವರಿ ತಿಂಗಳಿನಲ್ಲಿ ಚುನಾವಣೆ ಮುಗಿದಿರುವ ಬಗ್ಗೆ ಸಂಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಒಟ್ಟಾರೆಯಾಗಿ, ಸಿಬ್ಬಂದಿಗಳ ಕೊರತೆ ಹಾಗೂ ಎಸ್‌ಐಆರ್ ಕಾರ್ಯದ ಒತ್ತಡವನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಈ ರಿಯಾಯಿತಿ ನೀಡಿದೆಯಾದರೂ, ಕಾಲಮಿತಿಯೊಳಗೆ ಜಿಬಿಎ ಚುನಾವಣೆ ನಡೆಸುವುದು ಈಗ ಸರ್ಕಾರದ ಜವಾಬ್ದಾರಿಯಾಗಿದೆ. ಕೋರ್ಟ್‌ನ ಈ ಕಡಾಖಂಡಿತ ಆದೇಶದ ಹಿನ್ನೆಲೆಯಲ್ಲಿ, ಇಲಾಖೆಯು ಡಿಸೆಂಬರ್ ಅಂತ್ಯದೊಳಗೆ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿ ಮುಗಿಸಲು ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

Leave a Reply

Your email address will not be published. Required fields are marked *