ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು (ಮೇ 02) ಎಸ್ಎಸ್ಎಲ್ಸಿ ಪರೀಕ್ಷೆ -1ರ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟಾರೆ ಶೇ. 66.14 ಮಕ್ಕಳು ತೇರ್ಗಡೆಯಾಗಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ 91.12 ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ ಜಿಲ್ಲೆ 42.43 ಫಲಿತಾಂಶದೊಂದಿಗೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಇಂದು ಬೆಳಗ್ಗೆ 11.30ಕ್ಕೆ ಮಂಡಳಿಯ ಅಧಿಕಾರಿಗಳ ಜತೆ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶವನ್ನು ಪ್ರಕಟಿಸಿದರು. ಮಂಡಳಿಯ ವೆಬ್ಸೈಟ್ http://karresults.nic.in ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಈ ಬಾರಿ 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.
ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 8,42,173 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 5,24,984 ವಿದ್ಯಾರ್ಥಿಗಳು ಪಾಸ್ ಆಗಿದ್ದು, 66.14 ರಷ್ಟು ಫಲಿತಾಂಶ ಬಂದಿದೆ. ಕರ್ನಾಟಕದಾದ್ಯಂತ 15,881 ಪ್ರೌಢಶಾಲೆಗಳಿಂದ 4,61,563 ಹುಡುಗರು ಮತ್ತು 4,34,884 ಹುಡುಗಿಯರು ಪರೀಕ್ಷೆಗೆ ದಾಖಲಾಗಿದ್ದರು. ಶೇ. 74 ಫಲಿತಾಂಶದೊಂದಿಗೆ ಈ ಬಾರಿಯೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಗಂಡು ಮಕ್ಕಳು 58.07 ರಷ್ಟು ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮೇ 07 ಕೊನೇ ದಿನವಾಗಿದ್ದು, ಶುಲ್ಕ ಪಾವತಿಗೆ ಮೇ 08 ಅಂತಿಮ ದಿನವಾಗಿದೆ. ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಮೇ 11ರವರೆಗೆ ಅವಕಾಶ ನೀಡಲಾಗಿದೆ.
ಮಂಡಳಿಯು ಈಗಾಗಲೇ ಪರೀಕ್ಷೆ-1, 2, 3 ನ ಹೊಸ ಮಾದರಿಯನ್ನು ಪರಿಚಯಿಸಿರುವುರಿಂದ ಮೊದಲನೆಯ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿ ಉತ್ತೀರ್ಣರಾಗದಿದ್ದರೆ, ವಿದ್ಯಾರ್ಥಿಯ ಫಲಿತಾಂಶವನ್ನು NC Not Completed (ಪೂರ್ಣಗೊಳಿಸಲಾಗಿಲ್ಲ) ಎಂದು ತೋರಿಸಲಾಗುತ್ತದೆ. ನಂತರ ಮೂರೂ ಪರೀಕ್ಷೆಗಳ ಪೈಕಿ ಗಳಿಸಿದ ಗರಿಷ್ಠ ಅಂಕಗಳ ಆಧಾರದ ಮೇಲೆ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುವುದು.
ಎಸ್ಸೆಸ್ಸೆಲ್ಸಿ 2025 ಎರಡನೇ ಪರೀಕ್ಷೆ ಮೇ 26 ರಿಂದ ಜೂನ್ 6ರವರೆಗೆ ನಡೆಯಲಿದೆ. ಮೂರನೇ ಪರೀಕ್ಷೆ ಜೂನ್ 23 ರಿಂದ ಜೂನ್ 30ರವರೆಗೆ ನಡೆಯಲಿದೆ.
ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗೆ ಒಟ್ಟು 8.9 ಲಕ್ಷ ವಿದ್ಯಾರ್ಥಿಗಳು ಕರ್ನಾಟಕ ಮಂಡಳಿಯ 10 ನೇ ತರಗತಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅವರಲ್ಲಿ 4.5 ಲಕ್ಷ ಹುಡುಗರು ಮತ್ತು 4.3 ಲಕ್ಷ ಹುಡುಗಿಯರು ವಾರ್ಷಿಕ ಮಂಡಳಿ ಪರೀಕ್ಷೆಗಳಲ್ಲಿ ಭಾಗವಹಿಸಿದ್ದರು. ಒಟ್ಟಾರೆ ಉತ್ತೀರ್ಣ ಶೇಕಡಾವಾರು 73.40 ರಷ್ಟಿತ್ತು, ಇದು 2023 ರಲ್ಲಿ 83.89 ಪ್ರತಿಶತ ಮತ್ತು 2022 ರಲ್ಲಿ 85.13 ಪ್ರತಿಶತದಿಂದ ಕಡಿಮೆಯಾಗಿದೆ.


