Greater Bengaluru News9 : ರಾಜ್ಯದಲ್ಲಿ ಉಷ್ಣಾಂಶ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಹತ್ವದ ಮನವಿಯೊಂದನ್ನು ಮಾಡಿದ್ದಾರೆ. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜನರು ಸ್ವಯಂಪ್ರೇರಿತವಾಗಿ ‘ಸೆಲ್ಫ್ ಲಾಕ್‌ಡೌನ್’ (Self Lockdown) ಅನುಸರಿಸಬೇಕು ಎಂದು ಅವರು ತಿಳಿಸಿದ್ದಾರೆ.
ಬಿಸಿಲಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸರ್ಕಾರವು ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಸೂಚಿಸಿದೆ:
ಸರ್ಕಾರದ ಪ್ರಮುಖ ಮಾರ್ಗಸೂಚಿಗಳು:
ಮಧ್ಯಾಹ್ನ ಸಂಚಾರಕ್ಕೆ ನಿರ್ಬಂಧ: ಮಧ್ಯಾಹ್ನ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗದಂತೆ ಸೂಚಿಸಲಾಗಿದೆ.
ಜಲಸಂರಕ್ಷಣೆ: ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಲು ಅತೀ ಹೆಚ್ಚು ನೀರು ಕುಡಿಯಬೇಕು.
ಸುರಕ್ಷತಾ ಸಾಧನಗಳ ಬಳಕೆ: ಅನಿವಾರ್ಯವಾಗಿ ಹೊರಗೆ ಹೋಗುವ ಸಂದರ್ಭದಲ್ಲಿ ಛತ್ರಿ, ಟೋಪಿ ಮತ್ತು ಸನ್ ಪ್ರೊಟೆಕ್ಷನ್ ಗೇರ್‌ಗಳನ್ನು ಕಡ್ಡಾಯವಾಗಿ ಬಳಸಲು ತಿಳಿಸಲಾಗಿದೆ.
ವಿಶೇಷ ಕಾಳಜಿ: ವೃದ್ಧರು, ಮಕ್ಕಳು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರ ಬಗ್ಗೆ ಕುಟುಂಬಸ್ಥರು ವಿಶೇಷ ಗಮನ ಹರಿಸಬೇಕು.
”ಬಿಸಿಲಿನಿಂದ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಬಾರದಂತೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸುವ ಮೂಲಕ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ” ಎಂದು ಸಚಿವರು ಪೋಸ್ಟರ್ ಮೂಲಕ ವಿನಂತಿಸಿದ್ದಾರೆ.



