Greater Bengaluru News9 : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ – BESCOM) ಯೋಜನೆಗಳಿಗೆ ಸಂಬಂಧಿಸಿದಂತೆ ಸಾಮಗ್ರಿ ಪೂರೈಸಿದ ಕಂಪನಿಗೆ ನೀಡಬೇಕಿದ್ದ ₹9.31 ಕೋಟಿ ಹಣವನ್ನು ಬೇರೆಡೆಗೆ ವರ್ಗಾಯಿಸಿ ವಂಚಿಸಿದ ಆರೋಪದಡಿ ‘ಎಲೆಕ್ಟ್ರಿಕಲ್ ಎನರ್ಜಿ ಇಕ್ವಿಪ್‌ಮೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ (ಇಇಇ – EEE) ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅಶ್ವಥ್ ರೆಡ್ಡಿ ಎನ್. ಅವರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW) ಬಂಧಿಸಿದೆ. ಆರೋಪಿಯನ್ನು ದೆಹಲಿಯ ಸಾಕೇತ್ ನ್ಯಾಯಾಲಯದ ಮುಖ್ಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಕರ್ನಾಟಕದಲ್ಲಿ ಬೆಸ್ಕಾಂ ಕಾಮಗಾರಿಗಳ ಜಾರಿಗೆ ಅಗತ್ಯವಿದ್ದ ಸಾಮಗ್ರಿಗಳನ್ನು ಪೂರೈಸಲು 2024ರ ಆಗಸ್ಟ್ 8 ರಂದು ‘ವಿಶುವಲ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ (ವಿಟಿಐ – VTI) ಮತ್ತು ಅಶ್ವಥ್ ರೆಡ್ಡಿ ಮಾಲೀಕತ್ವದ ಇಇಇ (EEE) ಕಂಪನಿ ನಡುವೆ ಒಡಂಬಡಿಕೆ (MoU) ನಡೆದಿತ್ತು.
ಕರಾರಿನ ಪ್ರಕಾರ, ಬೆಸ್ಕಾಂನಿಂದ ಬರುವ ಬಿಲ್ ಹಣವನ್ನು ಎಸ್ಕ್ರೋ (Escrow) ಖಾತೆಯ ಮೂಲಕವೇ ಪಾವತಿಸುವುದಾಗಿ ನಂಬಿಸಿ, ವಿಟಿಐ ಕಂಪನಿಯಿಂದ ಸುಮಾರು ₹9.31 ಕೋಟಿ ಮೌಲ್ಯದ ಸಾಮಗ್ರಿಗಳನ್ನು ಪೂರೈಸಿಕೊಳ್ಳಲಾಗಿತ್ತು. ಆದರೆ, ಎಸ್ಕ್ರೋ ಖಾತೆಯ ವ್ಯವಸ್ಥೆಯನ್ನು ಜಾರಿಗೆ ತರದೆ, ಬೆಸ್ಕಾಂನಿಂದ ಬಂದ ಹಣವನ್ನು ನೇರವಾಗಿ ಇಇಇ ಕಂಪನಿಯ ಬೇರೆ ಖಾತೆಗಳಿಗೆ ವರ್ಗಾಯಿಸಿ ವಂಚಿಸಲಾಗಿದೆ ಎಂದು ವಿಟಿಐ ಸಂಸ್ಥೆ ಆರೋಪಿಸಿತ್ತು. ಈ ಸಂಬಂಧ 2025ರ ಸೆಪ್ಟೆಂಬರ್ 8 ರಂದು ದೆಹಲಿಯ ಇಒಡಬ್ಲ್ಯೂ (EOW) ಠಾಣೆಯಲ್ಲಿ ದೂರು ದಾಖಲಾಗಿತ್ತು.
ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಅರ್ಜಿ ವಜಾ:
ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಆರೋಪಿ ಅಶ್ವಥ್ ರೆಡ್ಡಿ ದೆಹಲಿ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿ, “ಯಾವುದೇ ಎಸ್ಕ್ರೋ ಖಾತೆಗೆ ಹಣ ಬಿಡುಗಡೆ ಮಾಡಿಲ್ಲ ಹಾಗೂ ಇಇಇ ಕಂಪನಿಗೆ ಸಂಬಂಧಿಸಿದ ಯಾವುದೇ ಬಾಕಿ ಬಿಲ್‌ಗಳು ಬೆಸ್ಕಾಂ ಬಳಿ ಉಳಿದಿಲ್ಲ, ಎಲ್ಲಾ ಹಣವನ್ನು ಪಾವತಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದರು.
ಇದರಿಂದಾಗಿ ಅಶ್ವಥ್ ರೆಡ್ಡಿ ಅವರ ವಾದ ಸುಳ್ಳು ಎಂದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಮತ್ತು ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ದೆಹಲಿ ಹೈಕೋರ್ಟ್ ಜೂನ್ 9, 2026 ರಂದು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದು ಕೇವಲ ಸಿವಿಲ್ ವಿವಾದವಲ್ಲ, ಕ್ರಿಮಿನಲ್ ವಂಚನೆಯ ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಹಣದ ಜಾಡು ಪತ್ತೆಗೆ ತನಿಖೆ ಚುರುಕು:
ದೆಹಲಿ ಸಾಕೇತ್ ನ್ಯಾಯಾಲಯದಲ್ಲಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು 6 ದಿನಗಳ ಕಸ್ಟಡಿ ಕೋರಿದ್ದರು. ಆದರೆ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಜಿಎಸ್‌ಟಿ (GST) ದಾಖಲೆಗಳು, ಇನ್‌ವಾಯ್ಸ್‌ಗಳು ಹಾಗೂ ಖರೀದಿ ಆದೇಶದ (Purchase Order) ನೈಜತೆಯನ್ನು ಮುಖಾಮುಖಿ ಪರಿಶೀಲನೆ ನಡೆಸಲು ನ್ಯಾಯಾಲಯ 2 ದಿನಗಳ ಪೊಲೀಸ್ ಕಸ್ಟಡಿ ಮಂಜೂರು ಮಾಡಿದೆ.
ಬೆಸ್ಕಾಂನಿಂದ ಬಂದ ಹಣ ಯಾವ್ಯಾವ ಖಾತೆಗಳಿಗೆ ವರ್ಗಾವಣೆಯಾಗಿದೆ ಮತ್ತು ಅದರ ಅಂತಿಮ ಫಲಾನುಭವಿಗಳು ಯಾರು ಎಂಬ ಹಣದ ಹರಿವಿನ ಜಾಡನ್ನು (Money trail) ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದಲ್ಲೂ ಚೆಕ್ ಬೌನ್ಸ್ ಪ್ರಕರಣಗಳು:
ಈ ವಹಿವಾಟಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲೂ ಅಶ್ವಥ್ ರೆಡ್ಡಿ ವಿರುದ್ಧ ಪ್ರತ್ಯೇಕ ನ್ಯಾಯಾಲಯಗಳಲ್ಲಿ ಚೆಕ್ ಬೌನ್ಸ್ ಪ್ರಕರಣಗಳು ನಡೆಯುತ್ತಿವೆ. ತುಮಕೂರಿನ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಆರೋಪಿ ಗೈರುಹಾಜರಾದ ಕಾರಣ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಚೆಕ್ ಮೊತ್ತ ಸಂಪೂರ್ಣ ಪಾವತಿಯಾದ ಹಿನ್ನೆಲೆಯಲ್ಲಿ ಕೇಸ್ ಇತ್ಯರ್ಥಗೊಂಡಿರುವುದಾಗಿ ತಿಳಿದುಬಂದಿದೆ.


