Greater Bengaluru News9 : ನಗರದಲ್ಲಿ ರೌಡಿಶೀಟರ್ ಅಜಯ್ ಕುಮಾರ್ @ ಚಿನ್ನಿ ‘ಸಿ ಬಾಸ್’ ಎಂಬ ಹೆಸರಿನಲ್ಲಿ ಸಂಚರಿಸುತ್ತಿದ್ದು, ಇದೀಗ ಸೊಷಿಯಲ್ ಮೀಡಿಯಾದಲ್ಲಿ ಫುಲ್ ಹವಾ ಕ್ರಿಯೇಟ್ ಮಾಡಿದ್ದಾನೆ. ನಡುರಸ್ತೆಯಲ್ಲೇ ಹಾರ-ತುರಾಯಿ ಹಾಕಿಸಿಕೊಂಡು ಭರ್ಜರಿಯಾಗಿ ಜನ್ಮದಿನ ಆಚರಿಸಿದ ವಿಡಿಯೋ ವೈರಲ್ ಆಗಿದೆ. ರಸ್ತೆ ಮಧ್ಯೆ ಬರ್ತ್‌ಡೇ ಮಾಡಿಕೊಂಡರೂ ತಡೆದವರೂ ಇಲ್ಲ, ಕೇಳಿದವರೂ ಇಲ್ಲ ಎನ್ನುವ ಪ್ರಶ್ನೆ ನಾಗರಿಕರಲ್ಲಿ ಎದ್ದಿದೆ. ರೌಡಿಶೀಟರ್‌ಗಳಿಗೆ ಪೊಲೀಸರ ಭಯವೇ ಇಲ್ವಾ ಎಂಬ ಚರ್ಚೆ ಕೇಳಿಬರುತ್ತಿದೆ.
‘ಸಿ ಬಾಸ್’, ‘ಕ್ರಾಂತಿವೀರ’, ‘ಮದಕರಿ’ ಎಂಬ ನಾಮಗಳಿಂದ ಇನ್ಸ್‌ಟಾಗ್ರಾಮ್ ಅಕೌಂಟ್‌ಗಳನ್ನು ತೆರೆದುಕೊಂಡಿರುವ ಅಜಯ್ ಕುಮಾರ್, ತನ್ನ ಬರ್ತ್‌ಡೇ ವಿಡಿಯೋ ಹಾಗೂ ಬೈಕ್ ಸವಾರಿಯ ದೃಶ್ಯಗಳನ್ನು ಸೊಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಯುವಕರಿಂದ ಸಾವಿರಾರು ಫಾಲೋಗಳನ್ನು ಕಲೆಹಾಕಿದ್ದಾನೆ. ಅಜಯ್ ಗುಂಪು ನಗರದಾದ್ಯಂತ ಗುಂಪುಗೂಡಿ ಬೈಕ್‌ನಲ್ಲಿ ಓಡಾಡುವ ದೃಶ್ಯಗಳೂ ವೈರಲ್ ಆಗಿವೆ.
2017ರಲ್ಲಿ ರೌಡಿಶೀಟರ್ ಮೋನಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಜಯ್ ಕುಮಾರ್. ಮೋನಿಯನ್ನು ಮುಖಕ್ಕೆ 24 ಬಾರಿ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಕ್ಕಾಗಿ ಜಾಲಹಳ್ಳಿ ಪೊಲೀಸರು ಅವನನ್ನು ಬಂಧಿಸಿದ್ದರು. ಈಗ ಮತ್ತೆ ಬೆಂಗಳೂರು ನಾರ್ತ್ ಪ್ರದೇಶದಲ್ಲಿ ಆಕ್ಟಿವ್ ಆಗಿರುವ ಅಜಯ್ ವಿರುದ್ಧ ಜಾಲಹಳ್ಳಿ, ಯಶವಂತಪುರ, ಗಂಗಮ್ಮನ ಗುಡಿ, ವಿದ್ಯಾರಣ್ಯಪುರ, ಕೊಡಗೇಹಳ್ಳಿ ಸೇರಿದಂತೆ ಅನೇಕ ಠಾಣೆಗಳಲ್ಲಿ 21ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ರಾಬರಿ, ಡಕಾಯಿತಿ, ಗಾಂಜಾ ಹಾಗೂ ಡ್ರಗ್ ಪೆಡ್ಲಿಂಗ್, ರಿಯಲ್ ಎಸ್ಟೇಟ್ ದಂಧೆಗಳಲ್ಲಿ ತೊಡಗಿಕೊಂಡಿರುವ ಈ ಗ್ಯಾಂಗ್ ಸಾಮಾಜಿಕ ಸೇವೆ ಹೆಸರಿನಲ್ಲಿ ಪುಲ್‌ಬಿಲ್ಡಪ್ ಮಾಡಿಕೊಂಡು ಯುವಕರನ್ನು ಸೆಳೆಯುತ್ತಿದೆ. ರೌಡಿಶೀಟರ್ ಹವಾ ಹೆಚ್ಚಾಗುವುದರಿಂದ ಸಮಾಜದಲ್ಲಿ ಯುವಕರ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಉತ್ತರ ವಿಭಾಗ ಮತ್ತು ಸಿಸಿಬಿ ಪೊಲೀಸರ ಕಣ್ಣಿಂದ ಇಷ್ಟು ದೊಡ್ಡ ಅಕ್ರಮ ಚಟುವಟಿಕೆಗಳು ದೂರ ಏಕೆ? ಎನ್ನುವ ಪ್ರಶ್ನೆ ಗಂಭೀರವಾಗಿ ಕೇಳಿಬರುತ್ತಿದೆ. ಸಮಾಜಕ್ಕೆ ಅಪಾಯಕಾರಿಯಾದ ಇಂತಹ ರೌಡಿಶೀಟರ್‌ಗಳ ಬಾಲ ಕಟ್ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ನಟೋರಿಯಸ್ ಮಟ್ಟಕ್ಕೆ ಏರೋ ಸಾಧ್ಯತೆ ಜಾಸ್ತಿಯೇ ಇದೆ. ಹೀಗಾಗಿ ಪೊಲೀಸರ ತ್ವರಿತ ಮತ್ತು ಕಠಿಣ ಕ್ರಮ ಅಗತ್ಯವಾಗಿದೆ.


