ಬೆಂಗಳೂರು: ಕನ್ನಡದ ಹೆಸರಾಂತ ಸಾಹಿತಿಯಾಗಿರುವ ಎಚ್.ಎಸ್.ವೆಂಕಟೇಶ್ ಮೂರ್ತಿ ಅವರು ಇಂದು (ಮೇ 30) ಬೆಳಗ್ಗೆ ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ವೆಂಕಟೇಶ್ ಮೂರ್ತಿ ಅವರು ಚಿಕಿತ್ಸೆ ಫಲಕಾರಿಯಾಗದೇ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಇಂದು (ಮೇ 30) ಬೆಳಗ್ಗೆ 7.15ಕ್ಕೆ ಕೊನೆಯುಸಿರೆಳಿದ್ದಾರೆ. ಎಚ್ಎಸ್ವಿ ಎಂದೇ ಪರಿಚಿತರಾಗಿದ್ದ ವೆಂಕಟೇಶ್ ಮೂರ್ತಿ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಎಚ್ಎಸ್ವಿ ಅವರು 1944ರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೋದಿಗೆರೆ ಗ್ರಾಮದಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಎ ಪದವಿ ಪಡೆದಿದ್ದಾರೆ. ಅಲ್ಲದೆ, ಕನ್ನಡದಲ್ಲಿ ಕಥನ ಕವನಗಳು ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ವಾಸವಿದ್ದರು. ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಎಚ್ಎಸ್ವಿ ಗಮನಾರ್ಹ ಕೊಡುಗೆ ನೀಡಿದ್ದಾರೆ. 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಎಚ್ಎಸ್ವಿ ಅವರು ಮಕ್ಕಳಿಗಾಗಿ ಕವಿತೆ, ನಾಟಕ ಹಾಗೂ ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ‘ಋತುಸಂಹಾರ‘ ಕಾವ್ಯಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರವನ್ನು ಪಡೆದಿದೆ. ಕ್ರಿಯಾಪರ್ವ‘, ‘ಎಷ್ಟೊಂದು ಮುಗಿಲು‘, ‘ನದೀತೀರದಲ್ಲಿ‘, ‘ಉತ್ತರಾಯಣ‘ ಮೊದಲಾದವು ಇವರ ಮುಖ್ಯ ಕಾವ್ಯಕೃತಿಗಳು. ‘ಅಗ್ನಿವರ್ಣ’, ‘ಚಿತ್ರಪಟ’, ‘ಉರಿಯ ಉಯ್ಯಾಲೆ‘, ‘ಮಂಥರೆ‘ ಮೊದಲಾದುವು ಇವರ ಮುಖ್ಯ ನಾಟಕಗಳು.
ಎಚ್ಎಸ್ವಿ ಅವರು ಕನ್ನಡ ಚಿತ್ರರಂಗಕ್ಕೂ ತಮ್ಮದೇಯಾದ ಕೊಡುಗೆಯನ್ನು ನೀಡಿದ್ದಾರೆ. ವಿಜಯ ರಾಘವೇಂದ್ರ ನಟನೆಯ ಚಿನ್ನಾರಿ ಮುತ್ತ ಹಾಗೂ ಕೋಟ್ರೇಶಿ ಕನಸು, ರಮೇಶ್ ಅರವಿಂದ್ ನಟನೆಯ ಅಮೆರಿಕಾ ಅಮೆರಿಕಾ, ಪುನೀತ್ ರಾಜ್ಕುಮಾರ್ ಅಭಿನಯದ ಮೈತ್ರಿ, ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಮುಂತಾದ ಚಿತ್ರಗಳಿಗೆ ಹಾಡುಗಳು ಮತ್ತು ಸಂಭಾಷಣೆಗಳನ್ನು ರಚಿಸಿದ್ದಾರೆ. ಇದಿಷ್ಟೇ ಅಲ್ಲದೆ, ಕಿರುತೆರೆಯಲ್ಲಿ ಮುಕ್ತ ಹಾಗೂ ಮಹಾಪರ್ವ ಮುಂತಾದ ಧಾರಾವಾಹಿಗಳಿಗೆ ಶೀರ್ಷಿಕೆ ಹಾಡುಗಳನ್ನು ಸಹ ಬರೆದಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ.
ಕಾರಿನ ಮೇಲೆ ಮಳೆ ನೀರು ಹಾರಿಸಿದ್ದಕ್ಕೆ ಬೆರಳು ಕಚ್ಚಿ ವಿಕೃತಿ ಮೆರೆದ ಮಾಲೀಕ: ಓಕಳಿಪುರಂ ಅಂಡರ್ಪಾಸ್ನಲ್ಲಿ ಘಟನೆ


