ಬೆಂಗಳೂರು: ಕಾದು ತಿಂದಷ್ಟು ಹಣ್ಣು ರುಚಿ ಎನ್ನುವಂತೆ 18 ವರ್ಷಗಳ ಬಳಿಕ ಸಿಕ್ಕಿರುವ ಮೊದಲ ಐಪಿಎಲ್ ಟ್ರೋಫಿಯು ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಿಸಿದೆ. ಸುದೀರ್ಘ ಕಾಯುವಿಕೆ ನಂತರ ದೊರೆತಿರುವ ಈ ಗೆಲುವನ್ನು ಅಭಿಮಾನಿಗಳ ಜತೆಯಲ್ಲಿ ಸಂಭ್ರಮಿಸಲು ಆರ್ಸಿಬಿ ತಂಡ ಇಂದು (ಜೂನ್ 04) ವಿಜಯದ ಮೆರವಣಿಗೆಯನ್ನು ನಡೆಸಲಿದೆ.
ತಮ್ಮ ನಿಷ್ಠಾವಂತ ಅಭಿಮಾನಿಗಳೊಂದಿಗೆ ತಮ್ಮ ವೈಭವವನ್ನು ಆಚರಿಸಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿಜಯೋತ್ಸವದ ಮೆರವಣಿಗೆಯನ್ನು ಘೋಷಿಸಿದೆ. ಜೂನ್ 4 ರಂದು ಮಧ್ಯಾಹ್ನ 3.30ಕ್ಕೆ ಮೆರವಣಿಗೆ ಆರಂಭವಾಗಲಿದೆ. ವಿಧಾನಸೌಧದಿಂದ ಆರಂಭವಾಗಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೆರವಣಿಗೆ ಮುಕ್ತಾಯವಾಗಲಿದೆ. ಈ ಐತಿಹಾಸಿಕ ದಿನವನ್ನು ಆಚರಿಸಲು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದ್ದು, ಬೆಂಗಳೂರು ಕೆಂಪು ಬಣ್ಣಕ್ಕೆ ತಿರುಗಲಿದೆ.
🚨 RCB Victory Parade in Bengaluru ‼️
This one’s for you, 12th Man Army.
For every cheer, every tear, every year.
𝐋𝐨𝐲𝐚𝐥𝐭𝐲 𝐢𝐬 𝐑𝐨𝐲𝐚𝐥𝐭𝐲 𝐚𝐧𝐝 𝐭𝐨𝐝𝐚𝐲, 𝐭𝐡𝐞 𝐜𝐫𝐨𝐰𝐧 𝐢𝐬 𝐲𝐨𝐮𝐫𝐬.🏆More details soon… pic.twitter.com/fMWuCGkVWX
— Royal Challengers Bengaluru (@RCBTweets) June 4, 2025
ಪಂದ್ಯದ ವಿಚಾರಕ್ಕೆ ಬಂದರೆ, ಪಂಜಾಬ್ ಕಿಂಗ್ಸ್ ವಿರುದ್ಧ ಮಂಗಳವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಆರ್ಸಿಬಿ ತಂಡ ಅಮೋಘ ಬೌಲಿಂಗ್ ನಿರ್ವಹಣೆ ತೋರುವ ಮೂಲಕ 6 ರನ್ಗಳಿಂದ ಗೆದ್ದು ಹೊಸ ಇತಿಹಾಸ ಬರೆಯಿತು. ರಜತ್ ಪಾಟೀದಾರ್ ಆರ್ಸಿಬಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ಮೊದಲ ನಾಯಕ ಎನಿಸಿದರು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿಗಳಾದ ಕೈಲ್ ಜೇಮಿಸನ್ (48ಕ್ಕೆ 3) ಹಾಗೂ ಅರ್ಷದೀಪ್ ಸಿಂಗ್ (40ಕ್ಕೆ 3) ಬಿಗಿ ದಾಳಿಯ ನಡುವೆಯೂ ಅನುಭವಿ ವಿರಾಟ್ ಕೊಹ್ಲಿ (43 ರನ್, 35 ಎಸೆತ, 3 ಬೌಂಡರಿ) ಸಹಿತ ಇತರ ಬ್ಯಾಟರ್ಗಳ ಕೊಡುಗೆಯಿಂದ 9 ವಿಕೆಟ್ಗೆ 190 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಶಶಾಂಕ್ ಸಿಂಗ್ (61*ರನ್, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಹೋರಾಟದ ನಡುವೆಯೂ ಪಂಜಾಬ್ ಕಿಂಗ್ಸ್ 7 ವಿಕೆಟ್ಗೆ 184 ರನ್ಗಳಿಸಲಷ್ಟೇ ಶಕ್ತಗೊಂಡಿತು.
ಸವಾಲಿನ ಮೊತ್ತದ ಚೇಸಿಂಗ್ಗೆ ಇಳಿದ ಪಂಜಾಬ್ಗೆ ಪ್ರಿಯಾಂಶ್ (24)-ಪ್ರಭ್ಸಿಮ್ರನ್ ಸಿಂಗ್ (26) ಮೊದಲ ವಿಕೆಟ್ಗೆ 30 ಎಸೆತಗಳಲ್ಲಿ 43 ರನ್ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಜೋಶ್ ಇಂಗ್ಲಿಸ್ (39) ಚೇಸಿಂಗ್ಗೆ ಬಲ ತುಂಬಿದರು. ಇಂಗ್ಲಿಸ್ ವಿಕೆಟ್ ಪಡೆದ ಕೃನಾಲ್ (17ಕ್ಕೆ 2) ಪಂದ್ಯದ ಗತಿ ಬದಲಾಯಿಸಿದರು. 10ನೇ ಓವರ್ನಲ್ಲಿ ರೊಮಾರಿಯೊ ಶೆಫರ್ಡ್, ನಾಯಕ ಶ್ರೇಯಸ್ ಅಯ್ಯರ್ (1) ವಿಕೆಟ್ ಪಡೆದ ಬಳಿಕ ಪಂದ್ಯ ತಿರುವು ಪಡೆಯಿತು. ಅನುಭವಿ ಭುವನೇಶ್ವರ್ (38ಕ್ಕೆ 2) 17ನೇ ಓವರ್ನಲ್ಲಿ ವಧೇರ (15), ಸ್ಟೋಯಿನಿಸ್ (6) ವಿಕೆಟ್ ಪಡೆದು ಆರ್ಸಿಬಿ ಹಾದಿ ಸುಗಮಗೊಳಿಸಿದರು.
ಕೊನೆಗೂ ಐಪಿಎಲ್ ಟ್ರೋಫಿಗೆ ಮುತ್ತಿಟ್ಟ ಆರ್ಸಿಬಿ.. 18 ವರ್ಷಗಳ ಕನಸು ಅಂತೂ ನನಸು..!


