ಬೆಂಗಳೂರು: ಜೂನ್ 03ರಂದು ಐಪಿಎಲ್ 18ನೇ ಆವೃತ್ತಿಯ ಟ್ರೋಫಿ ಎತ್ತಿಹಿಡಿದ ಆರ್ಸಿಬಿ, ಲೀಗ್ ಇತಿಹಾಸದಲ್ಲಿ ತನ್ನ ಚೊಚ್ಚಲ ಕಪ್ಗೆ ಮುತ್ತಿಟ್ಟಿತು. ಗೆದ್ದ ಮರುದಿನವೇ ಜೂ.04ರಂದು ಬೆಂಗಳೂರಿಗೆ ಆಗಮಿಸಿದ ಫ್ರಾಂಚೈಸಿ ಆಟಗಾರರು, ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿ, ದೊಡ್ಡ ಕಾಲ್ತುಳಿತ ಘಟನೆಗೆ ಪರೋಕ್ಷವಾಗಿ ಸಾಕ್ಷಿಯಾಯಿತು. ಈ ಭೀಕರ ಘಟನೆಯಲ್ಲಿ 11 ಅಭಿಮಾನಿಗಳು ಮೃತಪಟ್ಟ ಹಿನ್ನೆಲೆ ಆರ್ಸಿಬಿ ಮಾಲೀಕರ ವಿರುದ್ಧ ಇದೀಗ ಕೇಸ್ ದಾಖಲಾಗಿದೆ. ಪ್ರಕರಣ ಕೋರ್ಟ್ ಮೆಟ್ಟಿಲಲ್ಲಿದೆ. ಈ ಮಧ್ಯೆ ಆರ್ಸಿಬಿ ಮಾಲೀಕರು ದಿಟ್ಟ ನಿರ್ಧಾರಕ್ಕೆ ಮುಂದಾಗಿರುವುದು ಫ್ಯಾನ್ಸ್ಗಳನ್ನು ಅಚ್ಚರಿಗೆ ದೂಡಿದೆ.
ಟ್ರೋಫಿ ಗೆದ್ದು ಒಂದು ವಾರ ಕಳೆಯುವ ಮುನ್ನವೇ ಹಲವು ಬೆಳವಣಿಗೆಗಳು ಸಂಭವಿಸಿದ್ದು, ಆರ್ಸಿಬಿ ಮಾಲೀಕರು ಹೊಸ ಆಯಾಮಕ್ಕೆ ಮುಂದಾಗಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಫ್ರಾಂಚೈಸಿಯನ್ನು ಮಾರಾಟ ಮಾಡಲು ನಿರ್ಧರಿಸಿರುವ ಪ್ರಸ್ತುತ ಮಾಲೀಕರಾಗಿರುವ ಬ್ರಿಟನ್ ಮೂಲದ ಡಿಯಾಜಿಯೊ ಪಿಎಲ್ಸಿ ಕಂಪನಿ, ಫ್ರಾಂಚೈಸಿಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮಾರಲು ಮಾತುಕತೆ ನಡೆಸಿದೆ ಎಂದು ‘ಎನ್ಡಿಟಿವಿ’ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಬರೋಬ್ಬರಿ 17,000 ಕೋಟಿ ರೂ.ಗೆ?
ಭಾರತದಲ್ಲಿ ಡಿಯಾಜಿಯೊ ಪಿಎಲ್ಸಿ ಮೂಲಕ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಆರ್ಸಿಬಿಯನ್ನು ಮುನ್ನಡೆಸುತ್ತಿದೆ. ಇದು ಈಗಾಗಲೇ ಸಂಭಾವ್ಯ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಫ್ರಾಂಚೈಸಿಯ ಮೌಲ್ಯಮಾಪನದ ಕುರಿತು ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಸದ್ಯ ಫ್ರಾಂಚೈಸಿಯನ್ನು ಸಂಪೂರ್ಣವಾಗಿ ಮಾರಲು ಮಾಲೀಕರು 2 ಬಿಲಿಯನ್ ಯುಎಸ್ ಡಾಲರ್ (ಸುಮಾರು 16,834 ಕೋಟಿ ರೂ.) ವರೆಗೆ ಬೇಡಿಕೆ ಇಡುವ ಸಾಧ್ಯತೆಗಳಿವೆ ಎಂದು ಬ್ಲೂಮ್ಬರ್ಗ್ ವರದಿ ಹೇಳಿದೆ.
ಆರ್ಸಿಬಿ ತಂಡದ ಮಾರಾಟದ ಸುದ್ದಿ ಹೊರಬೀಳುತ್ತಿದ್ದಂತೆ, ಇದೀಗ ಯುನೈಟೆಡ್ ಸ್ಪಿರಿಟ್ಸ್ನ ಷೇರುಗಳ ಬೆಲೆಯೂ ಹೆಚ್ಚಳ ಕಂಡಿದೆ. ಇಂದು (ಜೂ.10) ಬೆಳಗ್ಗೆ ಷೇರು ಬೆಲೆಗಳು ಶೇ.3.3ರಷ್ಟು ಏರಿಕೆ ಕಂಡಿವೆ. ಆದಾಗ್ಯೂ, ಫ್ರಾಂಚೈಸಿಯನ್ನು ಪೂರ್ಣ ಪ್ರಮಾಣದಲ್ಲಿ ಮಾರಾಟ ಮಾಡಬೇಕೋ ಅಥವಾ ಹಂಚಿಕೆಯಲ್ಲಿ ಮಾಡಬೇಕೋ ಎಂಬುದು ಇನ್ನೂ ಅಂತಿಮವಾಗಿಲ್ಲ. ಆರ್ಸಿಬಿಯನ್ನು ಮಾರುವುದು, ಬಿಡುವುದು ಎರಡೂ ಸದ್ಯ ಮಾಲೀಕರ ಕೈಯಲ್ಲಿದೆ ಎಂಬುದು ಮಾತ್ರ ಸ್ಪಷ್ಟ!


