Greater Bengaluru News9 : ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆ ಮೇ 3ರಂದು ನಡೆದಿದ್ದ ನೀಟ್ ಯುಜಿ (NEET UG) ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ರದ್ದುಗೊಳಿಸಿದೆ. ಪರೀಕ್ಷೆಯ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮರುಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ.
ರಾಜಸ್ಥಾನದ ಸಿಕಾರ್‌ನಲ್ಲಿ ಮೇ 1ರಂದೇ ‘ಊಹೆ ಪತ್ರಿಕೆ’ ರೂಪದಲ್ಲಿ ಕೆಲವು ಪ್ರಶ್ನೆಗಳು ಹರಿದಾಡಿದ್ದವು ಎಂಬ ಮಾಹಿತಿ ಬಹಿರಂಗವಾಗಿದೆ. ಈ ಊಹೆ ಪತ್ರಿಕೆಯಲ್ಲಿ ಇದ್ದ ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯಗಳ 100ಕ್ಕೂ ಹೆಚ್ಚು ಪ್ರಶ್ನೆಗಳು ಮೂಲ ಪ್ರಶ್ನೆಪತ್ರಿಕೆಗೆ ಹೋಲಿಕೆಯಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜಸ್ಥಾನ ವಿಶೇಷ ಕಾರ್ಯಾಚರಣೆ ತಂಡ (SOG) ತನಿಖೆ ಆರಂಭಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಸುಳಿವು ಸಿಕ್ಕ ತಕ್ಷಣವೇ ಎನ್‌ಟಿಎ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಿದೆ ಎಂದು ತಿಳಿದುಬಂದಿದೆ.
ಇದೇ ರೀತಿಯ ಆರೋಪಗಳು 2024 ಮತ್ತು 2025ರಲ್ಲಿಯೂ ಕೇಳಿಬಂದಿದ್ದವು. 2024ರ ಪ್ರಕರಣದಲ್ಲಿ ಸಿಬಿಐ ಪಾಟ್ನಾ ಹಾಗೂ ಹಜಾರಿಬಾಗ್ ಪ್ರದೇಶಗಳಲ್ಲಿ ದಾಳಿ ನಡೆಸಿ ಕೆಲ ಆರೋಪಿಗಳನ್ನು ಬಂಧಿಸಿತ್ತು.
ಇದೀಗ ಮತ್ತೊಮ್ಮೆ ಪರೀಕ್ಷೆ ರದ್ದುಗೊಂಡಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದ್ದು, ಮರುಪರೀಕ್ಷೆಯ ದಿನಾಂಕದ ಬಗ್ಗೆ ಎನ್‌ಟಿಎ ಶೀಘ್ರದಲ್ಲೇ ಸ್ಪಷ್ಟನೆ ನೀಡುವ ನಿರೀಕ್ಷೆಯಿದೆ.


